ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ೩೧ ಸಾವು
ಗಾಝಾ, ಮೇ ೨೧- ಒಂದೆಡೆ ಅಮೆರಿಕಾದ ಭದ್ರತಾ ಸಲಹೆಗಾರ ಜ್ಯಾಕ್ ಸುಲ್ಲಿವಾನ್ ಅವರು ಭೇಟಿ ನೀಡಿದ್ದ ಅವಧಿಯಲ್ಲೇ ಕೇಂದ್ರ ಗಾಜಾದ ನುಸಿರಾತ್ ನಿರಾಶ್ರಿತರ ಶಿಬಿರದಲ್ಲ ಇಸ್ರೇಲ್ ಪಡೆ ನಡೆಸಿದ ಭೀಕರ ದಾಳಿಯಲ್ಲಿ ೩೧ ಮಂದಿ ಮೃತಪಟ್ಟು, ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆ ಪ್ಯಾಲೇಸ್ಟಿನಿಯನ್ ಪ್ರದೇಶದ ನಾಗರಿಕ ರಕ್ಷಣಾ ಸಂಸ್ಥೆ ಕೂಡ ಮಾಹಿತಿ ನೀಡಿದೆ.
ಮಾನವೀಯ ನೆರವಿನ ಪ್ರಮುಖ ಮಾರ್ಗವಾಗಿರುವ ರಾಫಾ ಕ್ರಾಸಿಂಗ್‌ನಲ್ಲಿ ನೆಲೆಸಿರುವ ಇಸ್ರೇಲಿ ಪಡೆಗಳನ್ನು ಶೆಲ್ ಮಾರ್ಟಲ್‌ನಿಂದ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಹಮಾಸ್‌ನ ಸಶಸ್ತ್ರ ವಿಭಾಗವಾಗಿರುವ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಹೇಳಿಕೊಂಡಿದೆ. ಕಳೆದ ೨೪ ಗಂಟೆಗಳಲ್ಲಿ ತನ್ನ ವಿಮಾನವು ೧೨ಕ್ಕೂ ಹೆಚ್ಚಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ ಎಂದು ಭಾನುವಾರ ವರದಿ ಮಾಡಿದ ಇಸ್ರೇಲ್‌ನ ಮಿಲಿಟರಿ ತಿಳಿಸಿದೆ. ಈ ನಡುವೆ ತಾನು ವರದಿಗಳನ್ನು ಪರಿಶೀಲಿಸುತ್ತಿರುವುದಾಗಿ ಕೂಡ ಹೇಳಿಕೊಂಡಿದೆ. ಮೂಲಗಳ ಪ್ರಕಾರ ನುಸಿರಾತ್ ನಿರಾಶ್ರಿತರ ಶಿಬಿರದಲ್ಲಿ ಇನ್ನೂ ಅನೇಕ ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗಬಹುದೆಂದು ಹೇಳಲಾಗಿದೆ.