ಐಪಿಎಲ್: ನಾಳೆಯಿಂದ ಪ್ಲೇಆಫ್ ಆರಂಭ
ನವದೆಹಲಿ.ಮೇ.೨೦- ೧೭ನೇ ಆವೃತ್ತಿಯ ಲೀಗ್ ಹಂತ ಮುಗಿದಿದ್ದು ಐಪಿಎಲ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಪ್ಲೇಆಫ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ.ನಾಳೆಯಿಂದ ಪಂದ್ಯಗಳು ಆರಂಭವಾಗಲಿದೆ.
ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ೨೦ ಅಂಕಗಳೊಂದಿಗೆ ಅಗ್ರಸ್ಥಾನ ಪಡೆದ ಕೋಲ್ಕತ್ತಾ ನೈಟ್ ರೈಡರ್‍ಸ್ ತಂಡ ಮತ್ತು ಎರಡನೆ ಸ್ಥಾನ ಪಡೆದ ಸನ್ ರೈಸರ್‍ಸ್ (೧೭ಅಂಕ) ಮಂಗಳವಾರ (ಮೇ೨೧) ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್‌ನಲ್ಲಿ ೧ರಲ್ಲಿ ಕಾದಾಟ ನಡೆಸಲಿವೆ.
ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇನ್ನು ಗುಂಪಿನಲ್ಲಿ ಮೂರನೆ ಸ್ಥಾನ ಪಡೆದ ರಾಜಸ್ಥಾನ ರಾಯಲ್ಸ್ (೧೭ ಅಂಕ) ಮತ್ತು ಸತತ ಆರು ಪಂದ್ಯಗಳನ್ನು ಗೆದ್ದು ರೋಚಕವಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದಿರುವ ಆರ್‌ಸಿಬಿ (೧೪ ಅಂಕ) ಬುಧವಾರ ಮೇ೨೨ರಂದು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಕೂಡ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್ ೨ಕ್ಕೆ ಪ್ರವೇಶ ಪಡೆಯಲಿದೆ. ಕ್ವಾಲಿಫೈಯರ್ ೧ರಲ್ಲಿ ಸೋತ ತಂಡದ ವಿರುದ್ಧ ಚೆನ್ನೈನಲ್ಲಿ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶಿಸಲಿದೆ. ಮೇ೨೬ರಂದು ಫೈನಲ್ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.
ಪ್ಲೇಆಫ್ ಪಂದ್ಯಗಳು
ಮೇ೨೧ ಕೋಲ್ಕತ್ತಾ – ಸನ್‌ರೈಸರ್‍ಸ್
ಮೇ೨೨ ಆರ್‌ಸಿಬಿ- ರಾಜಸ್ಥಾನ
ಮೇ೨೪ ಎಲಿಮಿನೇಟರ್ ಗೆದ್ದ ತಂಡ -ಕ್ವಾಲಿಫೈಯರ್‌ನಲ್ಲಿ ಸೋತ ತಂಡ
ಮೇ.೨೬ ಕ್ವಾಲಿಫೈಯರ್ ೧ರಲ್ಲಿ ಗೆದ್ದ ತಂಡ- ಕ್ವಾಲಿಫೈಯರ್ ೨ರಲ್ಲಿ ಗೆದ್ದ ತಂಡ