ಕೇಜ್ರಿ ಹೇಳಿಕೆ, ಸುಪ್ರೀಂಗೆ ಅವಹೇಳನ
ನವದೆಹಲಿ,ಮೇ೧೭:ನೀವು ನನಗೆ ಮತ ಹಾಕಿದರೆ ನಾನು ಜೈಲಿಗೆ ಹೋಗಬೇಕಾಗಿಲ್ಲ ಎಂದಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದು ಸುಪ್ರೀಂಕೋರ್ಟ್‌ಗೆ ಮಾಡಿರುವ ಅವಮಾನ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಈ ಹೇಳಿಕೆ ವಿರುದ್ಧ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ಸುಪ್ರೀಂಕೋರ್ಟ್‌ಗೆ ಇದಕ್ಕಿಂತ ದೊಡ್ಡ ನಿಂದನೆ ಮತ್ತೊಂದಿಲ್ಲ. ಗೆಲುವು ಮತ್ತು ಸೋಲಿನ ಕುರಿತಂತೆ ಸುಪ್ರೀಂಕೋರ್ಟ್ ನಿರ್ಧಾರಗಳನ್ನು ಕೈಗೊಳ್ಳಲಿದೆಯೇ ಎಂದು ಶಾ ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂಕೋರ್ಟ್‌ಗೆ ಅವಮಾನವಾಗುವಂತಹ ಹೇಳಿಕೆಯನ್ನು ಕೇಜ್ರಿ ನೀಡಿದ್ದಾರೆ. ಕೋರ್ಟ್‌ನ ತೀರ್ಪು ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ, ಆಮ್ ಆದ್ಮಿ ಪಕ್ಷದ ಕೆಲ ಮಾಧ್ಯಮಗಳು ಇದು ಕೇಜ್ರಿವಾಲ್ ವಿಜಯವೆಂದು ಪರಿಗಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಘಟನೆಗೆ ಸಂಬಂಧಿಸಿದಂತೆ ದೋಷಾರೋಪಣ ಪಟ್ಟಿ ಇನ್ನು ನ್ಯಾಯಾಲಯದಲ್ಲಿದೆ. ದೆಹಲಿ ಮುಖ್ಯಮಂತ್ರಿಯನ್ನು ಜನತೆ ಮದ್ಯದ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿ ಎಂದು ಪರಿಗಣಿಸಿದ್ದಾರೆ.
ಒಬ್ಬ ಮತದಾರನಾಗಿ ಅವರು ಎಲ್ಲಿಗೆ ಹೋದರೂ ಮದ್ಯದ ಹಗರಣವನ್ನು ಜನತೆ ನೆನಪಿಸಿಕೊಳ್ಳುತ್ತಾರೆ. ಕೆಲವರಿಗೆ ದೊಡ್ಡ ಬಾಟಲ್‌ಗಳನ್ನು ನೀಡಬೇಕಾಗುತ್ತದೆ ಎಂದು ಶಾ ಕೇಜ್ರಿ ಹೇಳಿಕೆಯನ್ನು ಟೀಕಿಸಿದ್ದಾರೆ.