ಮಾಜಿ ಸಚಿವ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಪೂರ್ಣ ಮೇ.20ಕ್ಕೆ ತೀರ್ಪು
ಬೆಂಗಳೂರು,ಮೇ.17-ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ತೀರ್ಪನ್ನು ಮೇ.20ರ ಸೋಮವಾರಕ್ಕೆ ಕಾಯ್ದಿರಿಸಿದೆ.
ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಜಾಮೀನು ಪಡೆದಿದ್ದರೆ, ಈಗ ಮತ್ತೊಂದು ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದ ಪ್ರಕರಣದಲ್ಲಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಮುಂದುವರೆದಿತ್ತು. ಅಂತಿಮವಾಗಿ ಎರಡೂ ಕಡೆ ವಾದ – ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪನ್ನು ಮೇ.20ಕ್ಕೆ ಮುಂದೂಡಲಾಯಿತು.
ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 42ನೇ ಎಸಿಎಂಎಂ ನ್ಯಾಯಾಲಯ, ಗುರುವಾರವಷ್ಟೇ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯ ಇಂದು ವಿಚಾರಣೆಯನ್ನು ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ಎಸ್‌ಪಿಸಿ, ಹೊಳೆನರಸೀಪುರ ಪ್ರಕರಣದಲ್ಲಿ ಈ ಹಿಂದೆ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ. ಇದೀಗ ಅತ್ಯಾಚಾರ ಸೆಕ್ಷನ್ 376ನ್ನು ಸೇರ್ಪಡೆ ಮಾಡಲಾಗಿದೆ. ಸಂತ್ರಸ್ತೆಗೆ ಜೀವ ಭಯ ಇದೆ ಎಂಬುದಾಗಿ ಹೇಳಲಾಗಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅಲ್ಲದೇ ಅತ್ಯಾಚಾರ ಆರೋಪ ಸಾಬೀತಾದಲ್ಲಿ ಅಂತಹ ಪ್ರಕರಣಗಳ ವಿಚಾರಣೆಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಗೆ ಅವಕಾಶವಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ ಹಲವು ತೀರ್ಪುಗಳಲ್ಲಿ ತಿಳಿಸಲಾಗಿದೆ. ಅಲ್ಲದೇ ಅತ್ಯಾಚಾರ ಆರೋಪ ಸಂಬಂಧದ ತನಿಖೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬಾರದು ಎಂದು ಎಸ್‌ಪಿಪಿ ನ್ಯಾಯಾಲಯಕ್ಕೆ ವಿವರಿಸಿದರು.
ಅಲ್ಲದೇ ವಕೀಲರು, ಇದೊಂದು ಲೈಂಗಿಕ ಪ್ರಕರಣವಾಗಿದ್ದು, ಇನ್ ಕ್ಯಾಮೆರಾ ವಿಚಾರಣೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಅರ್ಜಿಗೆ ಸಂಬಂಧ ವಾದ ಮಂಡಿಸಲು ಸೂಚನೆ ನೀಡಿದರು. ಬರಿಗಾಲಿನಲ್ಲಿ ಬಂದಿದ್ದ ರೇವಣ್ಣ ಆದೇಶ ಪ್ರಕಟವಾಗುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದು, ಕೈಮುಗಿದು ನ್ಯಾಯಾಲಯದಲ್ಲಿ ನಿಂತಿದ್ದಾರೆ.
ರೇವಣ್ಣ ಪರ ವಕೀಲರ ವಾದ:
ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌, ಪ್ರಕರಣದಲ್ಲಿ ದೂರನ್ನು ಹೇಗೆ ದಾಖಿಸಲಾಗಿದೆ ಎಂಬುದರ ವಿವರಣೆ. ಇದೊಂದು ರೀತಿಯಲ್ಲಿ ಅರೇಬಿಯನ್‌ ನೈಟ್‌ ಕಥೆಯ ರೀತಿಯಲ್ಲಿದೆ. ಸಂತ್ರಸ್ಥೆ ದೂರನ್ನು ಟೈಪ್ ಮಾಡಿ ದಾಖಲಿಸಲಾಗಿದೆ. ಸಿಆರ್‌ಪಿಸಿ 154ರ ಅಡಿ ಅತ್ಯಾಚಾರ ಆರೋಪ ಪ್ರಕರಣಗಳನ್ನು ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು. ಸಂತ್ರಸ್ತೆ ಹೇಳಿಕೆಯನ್ನು ವಿಡಿಯೋ ಮಾಡಬೇಕಿತ್ತು. ಮಹಿಳೆಯ ಘನತೆ ಕಾಪಾಡುವ ನಿಟ್ಟಿನಲ್ಲಿ ಕಾಯಿದೆಗೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ ಇದನ್ನು ಪಾಲಿಸಲಾಗಿಲ್ಲ. ಪುರುಷ ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ ಅನ್ನು ಕಾನೂನು ಬಾಹಿರವಾಗಿ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.