ಚೀನಾ-ರಷ್ಯಾ ಹೊಸ ಯುಗ ಘೋಷಣೆ
ಬೀಜಿಂಗ್, ಮೇ ೧೬- ಬದಲಾಗುತ್ತಿರುವ ಜಾಗತಿಕ ರಾಜಕೀಯ ಸ್ಥಿತ್ಯಂತರಗಳ ನಡುವೆ ಚೀನಾ ಹಾಗೂ ರಷ್ಯಾ ಎರಡೂ ರಾಷ್ಟ್ರಗಳು ಅಮೆರಿಕಾ ವಿರುದ್ಧ ಒಟ್ಟಾಗಿ ಸಾಗಲು ಪಣ ತೊಟ್ಟಿದೆ. ಚೀನಾ ಭೇಟಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.
ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನ ಹೊರಗೆ ಕೆಂಪು ಕಾರ್ಪೆಟ್ ಮೇಲೆ ಪುಟಿನ್ ಅವರನ್ನು ಚೀನಾ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಅಮೋಘ ರೀತಿಯಲ್ಲಿ ಸ್ವಾಗತಿಸಿದರು. ಬಳಿಕ ಅಲ್ಲಿನ ಟಿಯಾನನ್‌ಮೆನ್ ಸ್ಕ್ವೇರ್‌ನಲ್ಲಿ ಪೀಪಲ್ಸ್ ರಿಬರೇಶನ್ ಆರ್ಮಿಯ ಸೈನಿಕರು ೨೧ ಗನ್ ಸೆಲ್ಯೂಟ್ ನಡೆಸಿದರು. ಈ ವೇಳೆ ಚೀನಾ ಹಾಗೂ ರಷ್ಯಾದ ರಾಷ್ಟ್ರಧ್ವಜಗಳನ್ನು ಬೀಸುವ ಮೂಲಕ ಸಮಾರಂಭವನ್ನು ಅಮೋಘ ರೀತಿಯಲ್ಲಿ ನಡೆಸಲಾಯಿತು. ೨೦೨೨ರಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸುವ ಕೆಲವು ದಿನಗಳ ಮುನ್ನ ಕೂಡ ಪುಟಿನ್ ಅವರು ಚೀನಾಗೆ ಭೇಟಿ ನೀಡಿದ್ದನ್ನು ನಾವಿಲ್ಲಿ ಗಮನಿಸಬಹುದು. ಇನ್ನು ಪುಟಿನ್ ಹಾಗೂ ಕ್ಸೀ ಅವರು ಗುರುವಾರ ?ಹೊಸ ಯುಗ? ಕುರಿತ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ. ಇದರಲ್ಲಿ ತೈವಾನ್, ಉಕ್ರೇನ್ ಹಾಗೂ ಉತ್ತರ ಕೊರಿಯಾ ಕೊರಿತಾದ ಸಮಾನ ಮನಸ್ಕ ನೀತಿಯನ್ನು ಘೋಷಿಸಿದೆ. ಅಲ್ಲದೆ ಶಾಂತಿಯುತ ಪರಮಾಣು ತಂತ್ರಜ್ಞಾನಗಳು ಮತ್ತು ಹಣಕಾಸು ವಿಚಾರದಲ್ಲಿ ಸಹಕಾರವನ್ನು ಕೂಡ ಘೋಷಿಸಿದೆ. ಇನ್ನು ಈ ವೇಳೆ ಮಾತನಾಡಿರುವ ಚೀನಾ ಅಧ್ಯಕ್ಷ ಜಿನ್‌ಪಿಂಗ್, ಇಂದು ಚೀನಾ-ರಷ್ಯಾ ನಡುವಿನ ಸಂಬಂಧವು ಕಷ್ಟಪಟ್ಟು ಸಂಪಾದಿಸಿದ್ದಾಗಿದೆ. ಹಾಗಾಗಿ ಎರಡು ಕಡೆಯವರು ಅದನ್ನು ಪಾಲಿಸಬೇಕು ಮತ್ತು ಪೋಷಿಸಬೇಕು. ಚೀನಾ ನಮ್ಮ ದೇಶಗಳ ಅಭಿವೃದ್ಧಿ ಮತ್ತು ಪುನರುಜ್ಜೀವನವನ್ನು ಜಂಟಿಯಾಗಿ ಸಾಧಿಸಲು ಸಿದ್ಧವಾಗಿದೆ ಮತ್ತು ಜಗತ್ತಿನಲ್ಲಿ ನ್ಯಾಯಸಮ್ಮತತೆ ಮತ್ತು ನ್ಯಾಯವನ್ನು ಎತ್ತಿಹಿಡಿಯಲು ಒಟ್ಟಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಉಕ್ರೇನ್‌ನಲ್ಲಿ ಇನ್ನೂ ರಷ್ಯಾ ಯುದ್ದ ಮುಂದುವರೆಸಿರುವುದು ಹಾಗೂ ಯುರೋಪ್ ರಾಷ್ಟ್ರಗಳ ವಿರುದ್ಧ ನಿಂತಿರುವ ನಡುವೆ ಚೀನಾ ಹಾಗೂ ರಷ್ಯಾ ನಡುವಿನ ಸಂಬಂಧವು ಮತ್ತಷ್ಟು ಗಾಢಗೊಂಡಿದೆ.