ಪ್ಯಾಲೆಸ್ತೀನ್ ಪರ ಭಾರೀ ಪ್ರತಿಭಟನೆ
ವಾಷಿಂಗ್ಟನ್, ಮೇ ೧೬- ಇತ್ತೀಚಿಗಷ್ಟೇ ಅಮೆರಿಕಾದ ವಿಶ್ವವಿದ್ಯಾನಿಲಯದಲ್ಲಿ ಇಸ್ರೇಲ್ ವಿರುದ್ಧವಾಗಿ ಪ್ಯಾಲೆಸ್ತೀನ್ ಪರವಾಗಿ ಭಾರೀ ದೊಡ್ಡ ರ್ಯಾಲಿ ನಡೆದು, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ನಡುವೆ ಇದೀಗ ಇಲ್ಲನ ಮತ್ತೊಂದು ವಿಶ್ವವಿದ್ಯಾನಿಲಯದಲ್ಲಿ ನಡೆದು ಕೂಡ ಇದೇ ರೀತಿಯ ಘಟನೆ ಪುನರಾವರ್ತನೆಯಾಗಿದೆ. ಇರ್ವಿನ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕೂಡ ಇದೀಗ ಪ್ಯಾಲೆಸ್ತೀನ್ ಪರ ಬೃಹತ್ ಪ್ರತಿಭಟನೆ ಆರಂಭವಾಗಿದ್ದು, ಮುಂಜಾಗ್ರತಾ ಭದ್ರತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.
ಇರ್ವಿನ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಕಟ್ಟಡವನ್ನು ಪ್ಯಾಲೇಸ್ಟಿನಿಯನ್ ಪರ ಪ್ರತಿಭಟನಾಕಾರರು ಆಕ್ರಮಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಅನೇಕ ಪೊಲೀಸ್ ಏಜೆನ್ಸಿಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸದ್ಯ ತರಗತಿಗಳನ್ನು ರದ್ದುಗೊಳಿಸಲಾಗಿದ್ದು, ಕ್ಯಾಂಪಸ್‌ನಲ್ಲಿರುವ ಜನರಿಗೆ ಸ್ಥಳದಲ್ಲಿ ಆಶ್ರಯ ನೀಡುವಂತೆ ಸಲಹೆ ನೀಡಿದರು ಎಂದು ವಿಶ್ವವಿದ್ಯಾಲಯದ ವಕ್ತಾರರು ತಿಳಿಸಿದ್ದಾರೆ. ?ಯಾವುದೇ ತರಗತಿಗಳು ನಡೆಯದ ಸಮಯದಲ್ಲಿ ಸುಮಾರು ೨೦೦ ರಿಂದ ೩೦೦ ಪ್ರತಿಭಟನಾಕಾರರು ಯುಸಿ ಇರ್ವಿನ್ ಉಪನ್ಯಾಸ ಸಭಾಂಗಣವನ್ನು ಸುತ್ತುವರೆದರು ಎಂದು ವಿಶ್ವವಿದ್ಯಾಲಯದ ವಕ್ತಾರ ಟಾಮ್ ವಸಿಚ್ ಹೇಳಿದ್ದಾರೆ. ಸಹಾಯಕ್ಕಾಗಿ ವಿಶ್ವವಿದ್ಯಾನಿಲಯದ ವಿನಂತಿಗೆ ಇರ್ವಿನ್ ಪೊಲೀಸರು ಸೇರಿದಂತೆ ಆರೆಂಜ್ ಕೌಂಟಿಯ ಹಲವಾರು ಕಾನೂನು ಜಾರಿ ಸಂಸ್ಥೆಗಳು ಪ್ರತಿಕ್ರಿಯಿಸಿದ್ದರಿಂದ ಯಾವುದೇ ಬಂಧನಗಳು ಅಥವಾ ಗಾಯಗಳು ವರದಿಯಾಗಿಲ್ಲ ಎಂದು ಇರ್ವಿನ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಈಗಾಗಲೇ ಅಮೆರಿಕಾದ ಹಲವು ಕಡೆಗಳಲ್ಲಿ ಪ್ಯಾಲೆಸ್ತೀನ್ ಪರವಾದ ಪ್ರತಿಭಟನೆಗಳು ನಡೆದಿದ್ದು, ಅದರಂತೆ ಇದೀಗ ಲಾಸ್ ಏಂಜಲೀಸ್‌ನ ದಕ್ಷಿಣಕ್ಕೆ ಸುಮಾರು ೬೫ ಕಿಮೀ ದೂರದಲ್ಲಿರುವ ಇರ್ವಿನ್‌ನಲ್ಲಿ ಕೂಡ ಪ್ರದರ್ಶನ ಆಯೋಜಿಸತವಾಗಿದೆ. ಪ್ರತಿಭಟನಾಕಾರರು ಕದನ ವಿರಾಮ ಮತ್ತು ನಾಗರಿಕ ಜೀವಗಳ ರಕ್ಷಣೆಗಾಗಿ ಕರೆ ನೀಡಿದ್ದಾರೆ. ಅಲ್ಲದೆ ವಿಶ್ವವಿದ್ಯಾನಿಲಯಗಳನ್ನು ಇಸ್ರೇಲಿ ಹಿತಾಸಕ್ತಿಗಳಿಂದ ದೂರವಿಡುವಂತೆ ಒತ್ತಾಯಿಸಲಾಗಿದೆ.