ಹಾಸ್ಯನಟ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕಾರ
ವಾರಣಾಸಿ,ಮೇ.೧೬-ಪ್ರಧಾನಿ ನರೇಂದ್ರ ಮೋದಿಯವರನ್ನು ಅನುಕರಿಸುವ ವೀಡಿಯೋಗಳಿಗೆ ಹೆಸರಾಗಿರುವ ಯೂಟ್ಯೂಬರ್ ಮತ್ತು ಹಾಸ್ಯನಟ ಶ್ಯಾಮ್ ರಂಗೀಲಾ ಅವರಿಗೆ ಚುನಾವಣಾ ಆಯೋಗ ಕಪಾಳಮೋಕ್ಷ ಮಾಡಿದೆ. ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿರುವ ಹಾಸ್ಯ ನಟ ಶ್ಯಾಮ್ ರಂಗೀಲಾ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ಈ ಸ್ಥಾನಕ್ಕೆ ಒಟ್ಟು ೫೫ ನಾಮಪತ್ರಗಳು ಸಲ್ಲಿಕೆಯಾಗಿದ್ದು, ವಿವಿಧ ಕಾರಣಗಳಿಂದ ೩೬ ನಾಮಪತ್ರಗಳು ಅಸಿಂಧುಗೊಂಡಿವೆ. ಸದ್ಯ ಪ್ರಧಾನಿ ಮೋದಿ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಸೇರಿದಂತೆ ೧೫ ಮಂದಿ ಕಣದಲ್ಲಿದ್ದಾರೆ.
ನಾಮಪತ್ರ ಸಲ್ಲಿಸಲು ಯತ್ನಿಸಿದರೆ ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಶ್ಯಾಮ್ ರಂಗೀಲಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೇ ೧೦ರಂದು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಲು ಯತ್ನಿಸಿ ವಿಫಲಗೊಂಡಿದ್ದು, ಮಂಗಳವಾರವೂ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಈ ಆರೋಪಗಳಿಗೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದೆ. ಅಫಿಡವಿಟ್‌ನಲ್ಲಿ ಕೆಲವು ದೋಷಗಳಿವೆ ಮತ್ತು ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .ನಿಮ್ಮ ಸಮ್ಮುಖದಲ್ಲಿ ನಿಮ್ಮ ನಾಮಪತ್ರವನ್ನು ಪರಿಶೀಲಿಸಲಾಗಿದೆ.. ದೋಷಗಳ ಬಗ್ಗೆ ನಾವು ನಿಮಗೆ ತಿಳಿಸಿದ್ದೇವೆ… ನೀವು ಸಲ್ಲಿಸಿದ ಅಫಿಡವಿಟ್ ಅಪೂರ್ಣವಾದ ಕಾರಣ ನಿಮ್ಮ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ಶ್ಯಾಮ್ ರಂಗೀಲಾ ಮಿಮಿಕ್ರಿ ವಿಶೇಷವಾಗಿ ರಾಜಕೀಯ ನಾಯಕರನ್ನು ಅನುಕರಿಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಎಂಬ ಟಿವಿ ಶೋ ಮೂಲಕ ಜನಪ್ರಿಯರಾದರು. ಆರಂಭದ ದಿನಗಳಲ್ಲಿ ಮೋದಿಯವರ ಕಟ್ಟಾ ಅಭಿಮಾನಿಯಾಗಿದ್ದ ಶ್ಯಾಮ್, ಅಲ್ಪಾವಧಿಗೆ ಅವರ ನೀತಿಗಳ ಟೀಕಾಕಾರರೂ ಆದರು. ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದರು.