ಇಬ್ಬರು ಶಂಕಿತ ಉಗ್ರರರ ಬಂಧನ
ದಿಸ್ಪುರ್‌ಮೇ೧೪:ನಿಷೇಧಿತ ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾದ ಬಾಂಗ್ಲಾದೇಶದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಗುವಾಹಟಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಶಂಕಿತ ಉಗ್ರರನ್ನು ಬಹರ್ ಮಿಯಾ (೩೦) ಮತ್ತು ರಾಸೆಲ್ ಮಿಯಾ (೪೦) ಎಂದು ಗುರುತಿಸಲಾಗಿದೆ. ಆರೋಪಿಗಳು ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ)ಗೆ ಸೇರಿದವರಾಗಿದ್ದು ಭಾರತದಲ್ಲಿ ನಿಷೇಧಿತ ಅಲ್ ಖೈದಾದೊಂದಿಗೆ (ಎಕ್ಯೂಐಎಸ್) ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುವ ಸಲುವಾಗಿ ಬಾಂಗ್ಲಾ ದೇಶದಿಂದ ಗುವಾಹಟಿಗೆ ಬಂದು ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಪಾಸ್‌ಪೋರ್ಟ್ ಇಲ್ಲದೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದಾರೆ. ಅಲ್ಲದೇ ಅಸ್ಸಾಂನಲ್ಲಿ ಭಯೋತ್ಪಾದನಾ ಜಾಲವನ್ನು ಹರಡಲು ಭಾರತೀಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ನಕಲಿ ಎಂದು ಶಂಕಿಸಲಾದ ಆಧಾರ್ ಮತ್ತು ಪಾನ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.