ಆಸ್ಟ್ರೇಲಿಯಾದ ಮಾಜಿ ಮಿಲಿಟರಿ ವಕೀಲನಿಗೆ ಜೈಲು
ಸಿಡ್ನಿ, ಮೇ ೧೪- ಅಫ್ಘಾನಿಸ್ತಾನದಲ್ಲಿ ಆಸ್ಟ್ರೇಲಿಯಾದ ಯುದ್ಧ ಅಪರಾಧಗಳ ಕುರಿತಾದ ಹಲವು ಬೆಚ್ಚಿಬೀಳಿಸುವ ಆರೋಪಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿದ್ದ ಮಾಜಿ ಮಿಲಿಟರಿ ವಕೀಲ ಡೇವಿಡ್ ಮೆಕ್ ಬ್ರೈಡ್‌ಗೆ ಐದು ವರ್ಷ ಎಂಟು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ. ಮಿಲಿಟರಿ ರಹಸ್ಯಗಳನ್ನು ಕದ್ದು ಹಂಚಿಕೊಂಡಿದ್ದಕ್ಕಾಗಿ ಡೇವಿಡ್ ಅವರು ಕಳೆದ ವರ್ಷ ತನ್ನ ವಿಚಾರಣೆಯ ಮುನ್ನಾದಿನದಂದು ತಪ್ಪೊಪ್ಪಿಕೊಂಡಿದ್ದರು.
ಆಸ್ಟ್ರೇಲಿಯನ್ ಪಡೆಗಳು ಯುದ್ಧದ ಸಮಯದಲ್ಲಿ ೩೯ ಆಫ್ಘನ್ನರನ್ನು ಕಾನೂನುಬಾಹಿರವಾಗಿ ಕೊಂದಿವೆ ಎಂದು ಮೆಕ್‌ಬ್ರೈಡ್ ಆರೋಪಿಸಿದ್ದರು. ಬಳಿಕ ಇದಕ್ಕೆ ಸಂಬಂಧಿಸಿದಂತೆ ಪುರಾವೆ ಲಭಿಸಿತ್ತು. ಇನ್ನು ಮೆಕ್ ಬ್ರೈಡ್ ಅವರ ಗಂಭೀರ ಅರೋಪವು ಇಡೀ ಆಸ್ಟ್ರೇಲಿಯಾದಲ್ಲೇ ಕೋಲಾಹಲ ಸೃಷ್ಟಿಸಿತ್ತು. ಮೆಕ್ ಬ್ರೈಡ್ ಅವರು ತಾನು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ಗೆ (ಎಬಿಸಿ) ದಾಖಲೆಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಅವರು ಆಸ್ಟ್ರೇಲಿಯಾದ ಮಿಲಿಟರಿ ಕಮಾಂಡರ್‌ಗಳ ವರ್ತನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ೨೦೧೭ರಲ್ಲಿ ಅಫ್ಘಾನ್ ಫೈಲ್ಸ್ ಎಂಬ ಸರಣಿ ಕೂಡ ಮೆಕ್ ಬ್ರೈಡ್ ಅವರ ಹೇಳಿಕೆಯನ್ನೇ ಆಧರಿಸಿದೆ. ಈ ಸರಣಿಯಲ್ಲಿ ಅಫ್ಘಾನಿಸ್ತಾನದಲ್ಲಿ ಆಸ್ಟ್ರೇಲಿಯಾದ ವಿಶೇಷ ಪಡೆಗಳ ಕಾರ್ಯಾಚರಣೆಗಳನ್ನು ತಿಳಿಸಿದೆ. ಇನ್ನು ?ಮೆಕ್‌ಬ್ರೈಡ್ ವೈಯಕ್ತಿಕ ಸಮರ್ಥನೆಯಿಂದ ಪ್ರೇರೇಪಿಸಲ್ಪಟ್ಟಿದ್ದಾರೆ ಮತ್ತು ಅವರು ದಾಖಲೆಗಳನ್ನು ಸಂಗ್ರಹಿಸಿ, ಸಂಗ್ರಹಿಸಿದ ಮತ್ತು ನಂತರ ಸೋರಿಕೆ ಮಾಡಿದ ರೀತಿ ಆಸ್ಟ್ರೇಲಿಯಾದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಅಪಾಯವನ್ನುಂಟು ಮಾಡಿದೆ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದ್ದರು.