ಕುಖ್ಯಾತ ಕನ್ನಗಳ್ಳನ ಬಂಧನ
ಬೆಂಗಳೂರು,ಮೇ.೧೪-ನಕಲಿ ಕೀ ಬಳಸಿ ಬೀಗಹಾಕಿರುವ ಮನೆಗಳಿಗೆ ನುಗ್ಗಿ ಕನ್ನಕಳವು ಮಾಡುತ್ತಿದ್ದ ಕುಖ್ಯಾತ ಕನ್ನಗಳ್ಳನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆತನಿಂದ ೨೭.೪೩ ಲಕ್ಷ ಮೌಲ್ಯದ ೪೨೨ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಕಾಶ್ ಅಲಿಯಾಸ್ ಬಾಲಾಜಿ ಬಂಧಿತ ಆರೋಪಿಯಾಗಿದ್ದು, ಆತನಿಂದ ೨೭.೪೩ ಲಕ್ಷ ಮೌಲ್ಯದ ೪೨೨ ಗ್ರಾಂ ಚಿನ್ನಾಭರಣಗಳು ಹಾಗೂ ಕೃತ್ಯವೆಸಗಲು ಉಪಯೋಗಿಸಿದ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಏ.೨೯ ರ ಸಂಜೆ ಬಂಡೇಪಾಳ್ಯದ ವ್ಯಕ್ತಿಯೊಬ್ಬರು ಪತ್ನಿಯ ಜೊತೆ ಮನೆಗೆ ಬೀಗ ಹಾಕಿಕೊಂಡು ಸಿನಿಮಾ ನೋಡಲು ಹೋಗಿ ವಾಪಸ್ ನೋಡಿದಾಗ ಮನೆಯಲ್ಲಿದ್ದ ಸುಮಾರು ೬೯ ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ. ಕುರಿತು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದ್ದು,ಅದನ್ನು ಕೈಗೆತ್ತಿಕೊಂಡ ಸಿಸಿಬಿ ಯ ಸಂಘಟಿತ ಅಪರಾಧ ದಳದ ಸಿಬ್ಬಂದಿ ತನಿಖೆಯನ್ನು ಮುಂದುವರೆಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆತನ ವಿಚಾರಣೆಯಲ್ಲಿ ಹಳೆಯ ಆರೋಪಿಯಾಗಿದ್ದು, ಆತನ ವಿರುದ್ಧ ಹೆಚ್.ಎಸ್.ಆರ್ ಲೇಔಟ್ ಮತ್ತು ಮೈಕೋ ಲೇಔಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ನಕಲೀ ಕೀ ಬಳಸಿ ಕಳುವು ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡಿರುತ್ತಾನೆ.
ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ೭ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆಯನ್ನು ಮುಂದುವರೆಸಿ ಬೇಗೂರು, ಚಂದ್ರಲೇಔಟ್, ಹೆಚ್.ಎಸ್.ಆರ್ ಲೇಔಟ್,ಹುಳಿಮಾವು ಕುಮಾರಸ್ವಾಮಿ ತಲಾ ೧ ಸೇರಿ ೬ ಪ್ರಕರಣಗಳಲ್ಲಿ ಆರೋಪಿಯು ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಹೇಳಿದರು.