ರಕ್ಷಣಾ ಸಚಿವರ ಹುದ್ದೆಯಿಂದ ಶೋಯಿಗುಗೆ ವಜಾ
ಕ್ಲೆಮ್ಲಿನ್ (ರಷ್ಯಾ), ಮೇ ೧೩- ಐದನೇ ಅವಧಿಗೆ ರಷ್ಯಾದ ಅಧ್ಯಕ್ಷರಾಗಿ ನೇಮಕಗೊಂಡಿರುವ ವ್ಲಾದಿಮಿರ್ ಪುಟಿನ್ ಇದೀಗ ತಮ್ಮ ಸಚಿವ ಸಂಪುಟದಲ್ಲಿ ಕೂಡ ಮಹತ್ತರ ಬದಲಾವಣೆಗೆ ಮುಂದಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ರಷ್ಯಾದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ, ಪುಟಿನ್ ಆಪ್ತರೆಂದೇ ಗುರುತಿಸಿಕೊಂಡಿರುವ ಸೆರ್ಗೆಯ್ ಶೋಯಿಗು ಅವರನ್ನು ಹುದ್ದೆಯಿಂದ ಬದಲಾಯಿಸಿದ್ದಾರೆ. ಸದ್ಯ ಶೋಯಿಗು ಜಾಗಕ್ಕೆ ಆಂಡ್ರೇ ಬೆಲೌಸೊವ್ ಅವರನ್ನು ನೇಮಿಸುವ ಸಾಧ್ಯತೆ ಇದೆ.
ಬೆಲೌಸೊವ್ ಈ ಹಿಂದೆ ರಷ್ಯಾದ ಮೊದಲ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ನಿಕೊಲಾಯ್ ಪಟ್ರುಶೇವ್ ಅವರ ಸ್ಥಾನಕ್ಕೆ ಶೋಯಿಗು ಅವರನ್ನು ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಭದ್ರತಾ ಸಚಿವಾಲಯಗಳು ಮತ್ತು ಸೇವೆಗಳ ಇತರ ಮುಖ್ಯಸ್ಥರು ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಸರ್ಕಾರದಲ್ಲಿ ತಮ್ಮ ಹುದ್ದೆಗಳನ್ನು ಉಳಿಸಿಕೊಳ್ಳುತ್ತಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇನ್ನು ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಷ್ಯಾ ಸರಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್, ಬೆಲೌಸೊವ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸುವ ನಿರ್ಧಾರವು “ಭದ್ರತಾ ಬ್ಲಾಕ್‌ನ ಆರ್ಥಿಕತೆಯನ್ನು ದೇಶದ ಆರ್ಥಿಕತೆಯ ಭಾಗವಾಗಿಸುವ”ಅಗತ್ಯಕ್ಕೆ ಸಂಬಂಧಿಸಿದೆ. ಇದು ಅರ್ಥಪೂರ್ಣವಾಗಿದೆ. ಏಕೆಂದರೆ ೧೯೮೦ ರ ದಶಕದ ಮಧ್ಯಭಾಗದಲ್ಲಿ ಸೋವಿಯತ್ ಒಕ್ಕೂಟದಂಥ ಪರಿಸ್ಥಿತಿಯತ್ತ ರಷ್ಯಾ ಸಮೀಪಿಸುತ್ತಿದೆ. ಹಾಗಾಗಿ ಮಿಲಿಟರಿ ಮತ್ತು ಕಾನೂನು ಜಾರಿ ಅಧಿಕಾರಿಗಳು ರಾಜ್ಯ ವೆಚ್ಚದ ೭.೪ ಪ್ರತಿಶತವನ್ನು ಹೊಂದಿದ್ದಾರೆ. ಅಂತಹ ಖರ್ಚು ದೇಶದ ಒಟ್ಟಾರೆ ಹಿತಾಸಕ್ತಿಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಅದಕ್ಕಾಗಿಯೇ ರಷ್ಯಾದ ಅಧ್ಯಕ್ಷರು ಆರ್ಥಿಕ ಹಿನ್ನೆಲೆ ಹೊಂದಿರುವ ನಾಗರಿಕರನ್ನು ರಕ್ಷಣಾ ಸಚಿವರಾಗಿ ಬಯಸಿದ್ದರು. ಇಂದು ಯುದ್ಧಭೂಮಿಯಲ್ಲಿ, ವಿಜೇತರು ನಾವೀನ್ಯತೆಗೆ ಹೆಚ್ಚು ಮುಕ್ತರಾಗಿದ್ದಾರೆ” ಎಂದು ಪೆಸ್ಕೋವ್ ಹೇಳಿದರು. ಇನ್ನು ಆಂಡ್ರೇ ಬೆಲೌಸೊವ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸುವ ಕ್ರಮವು ಹಲವರಲ್ಲಿ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಬೆಲೌಸೊವ್ ಅವರು ಈ ಹಿಂದೆ ಯಾವುದೇ ರೀತಿಯ ಮಿಲಿಟರಿಗೆ ಸಂಬಂಧಿಸಿದ ಹುದ್ದೆ ಅಲಂಕರಿಸಿರಲಿಲ್ಲ ಎನ್ನಲಾಗಿದ್ದು, ಅಲ್ಲದೆ ಅವರು ಯಾವುದೇ ಮಿಲಿಟರಿ ಹಿನ್ನೆಲೆಯನ್ನು ಕೂಡ ಹೊಂದಿಲ್ಲ. ಆದರೆ ಬೆಲೌಸೊವ್ ಅವರು ಪ್ರಬಲ ಆರ್ಥಿಕ ತಜ್ಞರಾಗಿದ್ದು, ಪ್ರಭಾವಶಾಲಿ ಆರ್ಥಿಕ ಸಲಹೆಗಾರರಲ್ಲಿ ಒಬ್ಬರಾಗಿದ್ದಾರೆ. ಈ ಕಾರಣಕ್ಕಾಗಿ ಶೋಯಿಗು ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದೆ. ಶೋಯಿಗು ಅವರು ೨೦೧೨ ರಿಂದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು.