ಆಂಧ್ರ, ಪ.ಬಂಗಾಳದಲ್ಲಿ ಹಿಂಸಾಚಾರ
ನವದೆಹಲಿ,ಮೇ೧೩- ಇಂದು ೯ ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು ೯೬ ಲೋಕಸಭಾ ಕ್ಷೇತ್ರಗಳಿಗೆ ನಡೆಸಿರುವ ೪ನೇ ಹಂತದ ಚುನಾವಣೆಯ ಮತದಾನ ಚುರುಕಾಗಿ ನಡೆದಿದ್ದು, ಪಶ್ಚಿಮ ಬಂಗಾಳ ಮತ್ತು ಆಂಧ್ರದಲ್ಲಿ ಚುನಾವಣಾ ಹಿಂಸಾಚಾರ ನಡೆದಿದೆ. ಉಳಿದೆಡೆ ಮತದಾನ ಶಾಂತಿಯುತವಾಗಿ ಸಾಗಿದೆ.
ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗೂ ಮತದಾನ ನಡೆದಿದ್ದು, ಆಂಧ್ರದ ಪಾಲನಾಡು ಜಿಲ್ಲೆಯ ಕೆಲವೆಡೆ ಚುನಾವಣಾ ಹಿಂಸಾಚಾರ ನಡೆದಿದ್ದು, ಚಿತ್ತೂರು ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರನ್ನು ರಕ್ಷಿಸಲಾಗಿದೆ. ಅನ್ನಮಯ್ಯ ಜಿಲ್ಲೆಯ ಮತಗಟ್ಟೆಯಲ್ಲಿ ಜನಸೇನಾ ಮತಗಟ್ಟೆ ಏಜೆಂಟರನ್ನು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬಲವಂತವಾಗಿ ಅಪಹರಣ ಮಾಡಿದ್ದಾರೆ ಎಂದು ಜನಸೇನಾ ಕಾರ್ಯಕರ್ತರು ಆರೋಪಿಸಿ ದಳವಾಯಿ ಮತಗಟ್ಟೆ ಕೇಂದ್ರದಲ್ಲಿ ವಿದ್ಯುನ್ಮಾನ ಮತಯಂತ್ರವನ್ನು ಧ್ವಂಸಗೊಳಿಸಿದ್ದು, ಮತದಾನ ಸ್ಥಗಿತಗೊಂಡಿದೆ.ಪಶ್ಚಿಮ ಬಂಗಾಳದ ೮ ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಕೆಲವೆಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಉದ್ವಿಗ್ನ ವಾತಾವರಣ ರೂಪುಗೊಂಡ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.ಪಶ್ಚಿಮ ಬಂಗಾಳದ ಬಿರ್ರ್‍‌ಭೋಮ್‌ನಲ್ಲಿನ ಮತದಾನ ಕೇಂದ್ರದ ಬಳಿಯ ತಮ್ಮ ಟೆಂಟ್‌ನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.ಪಶ್ಚಿಮ ಬಂಗಾಳದ ಆಂಧ್ರ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿದ್ದು, ಒಟ್ಟಾರೆ ಮಧ್ಯಾಹ್ನದವರೆಗೆ ಎಲ್ಲೆಡೆ ಶೇ. ೪೦ ರಿಂದ ೪೫ ರಷ್ಟು ಮತದಾನ ಆಗಿದೆ.ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ ೨೫, ತೆಲಂಗಾಣದ ೧೭, ಉತ್ತರ ಪ್ರದೇಶದ ೧೩, ಮಹಾರಾಷ್ಟ್ರದ ೧೧, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದ ತಲಾ ೮, ಬಿಹಾರದಲ್ಲಿ ೫, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ತಲಾ ೪ ಮತ್ತು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಕ್ಷೇತ್ರ ಸೇರಿದಂತೆ ೯೬ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.
ಬೆಳಿಗ್ಗೆ ೭ ಗಂಟೆಯಿಂದಲೇ ಮತದಾನ ಆರಂಭವಾಗಿದ್ದು ಸಂಜೆ ೬ರವರೆಗೆ ನಡೆಯಲಿದೆ.ಇಂದು ನಡೆದಿರುವ ಮತದಾನದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ಯಾಧವ್, ಅಸಾದುದ್ದೀನ್ ಓವೈಸಿ, ಕೇಂದ್ರ ಸಚಿವ ನಿತ್ಯಾನಂದ ರೈ, ಕೇಂದ್ರ ಸಚಿವ ಅರ್ಜುನ್‌ಮುಂಡಾ, ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ರಂಜನ್‌ಚೌಧರಿ, ನಟ ಶತ್ರುಘ್ನಸಿನ್ಹಾ, ಟಿಎಂಸಿಯ ಮೊಹುವಾ ಮೊಹಿತ್ರಾ, ಆಂಧ್ರ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್ ಶರ್ಮಿಳಾ ಸೇರಿದಂತೆ ಒಟ್ಟು ೧೭೧೭ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರ ನಿರ್ಧರಿಸಲಿದ್ದಾನೆ.ಗಣ್ಯರ ಮತದಾನ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭೆಗೆ ನಡೆದಿರುವ ಚುನಾವಣೆಯಲ್ಲಿ ಗಣ್ಯರು ಮತದಾನ ಮಾಡಿದ್ದು, ಮುಖ್ಯಮಂತ್ರಿ ವೈ.ಎಸ್.ಆರ್ ಜಗನ್‌ಮೋಹನ್‌ರೆಡ್ಡಿ ಕಡಪಾ ವಿಧಾನಸಭಾ ಕ್ಷೇತ್ರದ ಜಯಮಹಲ್ ಕ್ಷೇತ್ರದಲ್ಲಿ ಮತ ಹಾಕಿದರು. ಇವರ ಸಹೋದರಿ ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾರೆಡ್ಡಿ ಕಡಪಾದಲ್ಲಿ ಹಕ್ಕು ಚಲಾಯಿಸಿದರು. ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ಜನಸೇವಾ ಪಕ್ಷದ ಮುಖ್ಯಸ್ಥ ನಟ ಪವನ್ ಕಲ್ಯಾಣ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಅವರ ಪತ್ನಿ ಉಷಾನಾಯ್ಡು, ಹೈದ್ರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿಲತಾ, ನಟರಾದ ಜ್ಯೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿ ಸೇರಿದಂತೆ ಹಲವು ಖ್ಯಾತನಾಮರು ಮತ ಹಾಕಿದರು.ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಅವರು ಮೆಹಬೂಬಾ ನಗರ ಲೋಕಸಭಾ ಕ್ಷೇತ್ರದ ಕೂಡಂಗಲ್‌ನ ಮತಗಟ್ಟೆಯಲ್ಲಿ ಮತ ಹಾಕಿದರು. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರು ಸಿದ್ದಪೇಟ್‌ನ ಚಿಂತಮಡಕದಲ್ಲಿ ಮತ ಚಲಾಯಿಸಿದರು. ಇವರ ಪುತ್ರ,ಮಾಜಿ ಸಚಿವ ಕೆ.ಟಿ ರಾಮರಾವ್ ಸಹ ಹೈದ್ರಾಬಾದ್‌ನಲ್ಲಿ ಮತ ಹಾಕಿದರು.ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಕನ್ಹಯ್ಯ ಕುಮಾರ್ ಬಿಹಾರದ ಬೇಗುಸರಾಯ್‌ನಲ್ಲಿ ಮತ ಹಾಕಿದರು. ಕೇಂದ್ರ ಸಚಿವ ಕಿಶನ್‌ರೆಡ್ಡಿ ಸಿಖಂದರಾಬಾದ್‌ನ ಕಾಚೇಗುಡದಲ್ಲಿ ಕುಟುಂಬ ಸಮೇತರಾಗಿ ಮತ ಹಾಕಿದರು.ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ಯಾಧವ್ ಉಜ್ಜಯಿನಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಕೇಂದ್ರ ಸಚಿವ ರಾವ್ಸಾಹೇಬ್ ಪಾಟೀಲ್ ದಾನ್ವೆ ಮಹಾರಾಷ್ಟ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಈ ಬಾರಿ ಶೇಕಡಾ ನೂರರಷ್ಟು ಚುನಾವಣೆಯಲ್ಲಿ ಗೆಲ್ಲುತ್ತೇನೆ. ಮಹಾರಾಷ್ಟ್ರದಲ್ಲಿ ೪೫ ಸ್ಥಾನ ಮತ್ತು ದೇಶದಲ್ಲಿ ೪೦೦ ಸ್ಥಾನ ಪಡೆಯಲಿದ್ದೇವೆ ಎಂದಿದ್ದಾರೆ
ಮತ ಚಲಾಯಿಸಿದ ವೆಂಕಯ್ಯ ನಾಯ್ಡ
ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಅವರ ಪತ್ನಿ ಉಷಾ ನಾಯ್ಡು ಅವರು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತ ಚಲಾಯಿಸಿದ ನಂತರ ಅವರು ತಮ್ಮ ಬೆರಳುಗಳ ಮೇಲೆ ಅಳಿಸಲಾಗದ ಶಾಯಿ ಗುರುತು ತೋರಿಸಿ ಮತದಾನ ಮಾಡುವಂತೆ ಎಲ್ಲರಿಗೂ ಮನವಿ ಮಾಡಿದರು.
ನಿರ್ಣಾಯಕ: ಅಲ್ಲು ಅರ್ಜುನ್ಹೈ ದರಾಬಾದ್‌ನಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಮತ ಚಲಾಯಿಸಿ. ದೇಶದ ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ. ಮುಂದಿನ ೫ ವರ್ಷಗಳ ಕಾಲ ಇಂದು ಅತ್ಯಂತ ನಿರ್ಣಾಯಕ ದಿನವಾಗಿದೆ. ಹೆಚ್ಚು ಹೆಚ್ಚು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ
ಯೋಚಿಸಿ ಮತ ಚಲಾಯಿಸಿ; ಓವೈಸಿ ಹೈದರಾಬಾದ್‌ನ ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಹೈದರಾಬಾದ್‌ನ ಮತಗಟ್ಟೆಯಲ್ಲಿ ಮತದಾನ ಮಾಡಿ ಸಂಸತ್ ಚುನಾವಣೆಯಾಗಲಿ ಅಥವಾ ಪಂಚಾಯತ್ ಚುನಾವಣೆಯಾಗಲಿ ಯಾವಾಗಲೂ ಗಂಭೀರವಾಗಿ ಪರಿಗಣಿಸಬೇಕು. “ಪ್ರತಿ ಚುನಾವಣೆಯೂ ೫ ವರ್ಷಗಳ ಹಿಂದೆ ಇದ್ದಂತೆ ಇರಲು ಸಾಧ್ಯವಿಲ್ಲ. ಸವಾಲುಗಳು ಬೇರೆ, ಸಮಸ್ಯೆಗಳು ಬೇರೆ. ಇದು ನಮ್ಮ ದೇಶದ ಅತ್ಯಂತ ಮಹತ್ವದ, ಐತಿಹಾಸಿಕ ಸಂಸದೀಯ ಚುನಾವಣೆಯಾಗಿದೆ.ಹೀಗಾಗಿ ಜನರು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದಿದ್ದಾರೆ
ಪ್ರಜಾಪ್ರಭುತ್ವ ಬಲಪಡಿಸಿ:ಮೋದಿ
ಲೋಕಸಭೆ ಚುನಾವಣೆಯ ೪ನೇ ಹಂತದಲ್ಲಿ, ೧೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ೯೬ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಬಲಪಡಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಯುವ ಮತದಾರರು ಹಾಗೂ ಮಹಿಳಾ ಮತದಾರರು ಮತದಾನದ ಪ್ರಮಾಣ ಏರಿಕೆಗೆ ಶಕ್ತಿ ತುಂಬಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ನಾವೆಲ್ಲರೂ ನಮ್ಮ ಕರ್ತವ್ಯ ನಿರ್ವಹಿಸೋಣ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಆಂಧ್ರಪ್ರದೇಶ ವಿಧಾನಸಭೆಯ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಜನರಿಗೆ, ವಿಶೇಷವಾಗಿ ಮೊದಲ ಬಾರಿಗೆ ಮತದಾರರಿಗೆ ಮನವಿ ಮಾಡಿರುವ ಅವರು. ನಮ್ಮ ಉತ್ಸಾಹ ಪ್ರಜಾಪ್ರಭುತ್ವದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿ ಎಂದಿದ್ದಾರೆ.
ಒಡಿಶಾದಲ್ಲಿ ವಿಧಾನಸಭೆ ಚುನಾವಣೆ ಆರಂಭವಾಗಿದೆ. ಈ ರಾಜ್ಯದ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ ನೀಡಿದ ಅವರು, ನಿಮ್ಮ ಮತ ನಿಮ್ಮ ಧ್ವನಿ ಅದು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಕೇಳಲಿ ಎಂದಿದ್ದಾರೆ.