ದೇವರಾಜೇಗೌಡ ತೀವ್ರ ವಿಚಾರಣೆ
ಬೆಂಗಳೂರು,ಮೇ೧೧ ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಪ್ರಕರಣದ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿರುವ ವಕೀಲ ಹಾಗೂ ಬಿಜೆಪಿ ಮುಖಂಡ ಡಿ.ದೇವರಾಜೇಗೌಡನನ್ನು ಹೊಳೆನರಸೀಪುರದ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಇಂದು ಸಂಜೆಯ ಒಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ದೇವರಾಜೇಗೌಡ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಕಾರಿನಲ್ಲಿ ನಿನ್ನೆ ರಾತ್ರಿ ಹೋಗುತ್ತಿದ್ದ ಬಿಜೆಪಿ ಮುಖಂಡ ದೇವರಾಜೇಗೌಡನನ್ನು ಚಿತ್ರದುರ್ಗದ ಕೆಆರ್ ಗೇಟ್ ಬಳಿ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ಹೊಳೆನರಸೀಪುರದ ಗ್ರಾಮಾಂತರ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ತೆಗೆದುಕೊಂಡ ದೇವರಾಜೇಗೌಡರನ್ನು ಪೊಲೀಸರು ವಿಚಾರಣೆ ನಡೆಸತೊಡಗಿದ್ದಾರೆ.ದೇವರಾಜೇಗೌಡರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆಯ ದೂರನ್ನು ದಾಖಲಿಸಿದ್ದರು. ೨೦೨೩ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿ ಸೋತಿದ್ದ ದೇವರಾಜೇಗೌಡರು ಪ್ರಜ್ವಲ್ ರೇವಣ್ಣ ಅತ್ಯಾಚಾರ ಟೇಪುಗಳು ಸಾರ್ವಜನಿಕವಾಗಿ ಬಹಿರಂಗಗೊಂಡ ಬಳಿಕ ಪ್ರತಿದಿನ ಸುದ್ದಿಯಲ್ಲಿದ್ದರು ಮತ್ತು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದರು.ಅವರನ್ನು ಬಂಧಿಸುವಂತೆ ನಿನ್ನೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹೊಳೆನರಸೀಪುರ ಗ್ರಾಮಾಂತರ ವೃತ್ತ ನಿರೀಕ್ಷರ ಕಚೇರಿಯಲ್ಲಿ ದೇವರಾಜೇಗೌಡರ ವಿಚಾರಣೆ ನಡೆಸಲಾಗಿದೆ.
ಏ.೧ರಂದು ಎಫ್‌ಐಆರ್:
ಈ ನಡುವೆ ದೇವರಾಜೇಗೌಡ ಬಂಧನ ಹಲವು ಅನುಮಾನಗಳಿಗೆ ಕಾರಣವಾಗಿದೆ. ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ ೧ರಂದೇ ಎಫ್‌ಐಆರ್ ದಾಖಲಾಗಿದ್ದು, ಇಷ್ಟು ದಿನಗಳ ಕಾಲ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎದುರಾಗಿದೆ.
ಸಂತ್ರಸ್ತೆಯು ಏಪ್ರಿಲ್ ೧ರಂದು ರಾತ್ರಿ ೯.೩೦ಕ್ಕೆ ಠಾಣೆಗೆ ಹಾಜರಾಗಿ ದೂರು ನೀಡಿ ನನಗೆ ಹಾಸನದ ತಣ್ಣೀರುಹಳ್ಳಿ, ನಿಲವಾಗಿಲು ರಸ್ತೆಯಲ್ಲಿರುವ ನಿವೇಶನ ಮಾರಾಟ ಮಾಡುವ ವಿಚಾರವಾಗಿ ಹೊಳೆನರಸೀಪುರದ ಕಾಮಸಮುದ್ರ ಗ್ರಾಮದ ದೇವರಾಜೇಗೌಡರ ಜೊತೆ ೧೦ ತಿಂಗಳ ಹಿಂದೆ ಪರಿಚಯವಾಗಿ ಅಗಾಗ ಪೋನ್ ಮಾಡುತ್ತಾ ಬಂದಿದ್ದರು.
ಮನೆ ನಿರ್ಮಾಣದ ಭರವಸೆ:
ಸಂತ್ರಸ್ತೆಯ ಪತಿ ಹೊಳೇನರಸೀಪುರದಲ್ಲಿ ನಿವೇಶನ ಹೊಂದಿದ್ದು ಆ ನಿವೇಶನದಲ್ಲಿ ನಾನೇ ಮನೆ ಕಟ್ಟಿಸಿಕೊಡುತ್ತೇನೆ ಎಂದು ಹೇಳಿದ್ದ ದೇವರಾಜೇಗೌಡರು, ಎಸಿ ಸಾಹೇಬರು ನನಗೆ ಪರಿಚಯವಿರುತ್ತಾರೆ. ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ. ನೀವು ಒಬ್ಬರೇ ಹಾಸನಕ್ಕೆ ಬನ್ನಿ ಎಂದು ಕರೆಸಿಕೊಂಡು ಇನೋವಾ ಕಾರಿನಲ್ಲಿ, ನಾಲ್ಕೈದು ಕಡೆ ಸುತ್ತಾಡಿಸಿ ನಂತರ ಹಾಸನ, ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕ ಘಟಕದ ಹಿಂದಿರುವ ಜನನಿಬಿಡ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೈಕೈಗೆ ಮುಟ್ಟಿ ದೈಹಿಕವಾಗಿ ಹಿಂಸೆ ನೀಡಿರುತ್ತಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಗುಪ್ತಾಂಗ ಪ್ರದರ್ಶನ:
ಇಷ್ಟೇ ಅಲ್ಲದೆ, ದೇವರಾಜೇಗೌಡರವರು ಸಂತ್ರಸ್ತೆಯನ್ನು ಬಲವಂತದಿಂದ ದೈಹಿಕವಾಗಿ ಬಳಸಿಕೊಂಡಿದ್ದಲ್ಲದೆ ಎರಡು ತಿಂಗಳ ಹಿಂದೆ ವಾಟ್ಸಪ್‌ನಲ್ಲಿ, ಖಾಸಗಿ ಅಂಗವನ್ನು ತೋರಿಸಿರುತ್ತಾರೆ. ನಾನು ಹೇಳಿದ ಹಾಗೆ ನೀನು ಕೇಳಬೇಕು, ನಾನು ಕರೆದ ಕಡೆ ನೀನು ಬರಬೇಕು, ನಾನು ಹೇಳಿದ ಹಾಗೆ ಮಾಡದಿದ್ದರೆ ನಿನ್ನ ಪತಿಯನ್ನು ಇಲ್ಲದ ಹಾಗೆ ಮಾಡುತ್ತೇನೆಂದು ಹೆದರಿಸಿ ಸಂತ್ರಸ್ತೆಯ ಮನೆಗೆ ಆಗಾಗ್ಗೆ ಬಂದು ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಜೀವ ಬೆದರಿಕೆ ಹಾಕಿರುತ್ತಾನೆ.
ನಂತರ ಫೆಬ್ರವರಿ ೨ರಂದು ಸಂತ್ರಸ್ತೆಗೆ ಕರೆ ಮಾಡಿ, ‘ನಾನು ಹೇಳಿದ ಜಾಗಕ್ಕೆ ನೀನು ಬರಲಿಲ್ಲವೆಂದರೆ ನಾನು ನಿನಗೆ ಕಳುಹಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆಂದು’ ಗದರಿಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿದೆ.
ಬಂಧಿಸಿಲ್ಲ ಯಾಕೆ?
ದೇವರಾಜೇಗೌಡ ಇಷ್ಟೊಂದು ಬಲವಾದ ಆರೋಪಗಳಿದ್ದರೂ, ಏಪ್ರಿಲ್ ೧ರಂದೇ ಎಫ್‌ಐಆರ್ ದಾಖಲಾಗಿದ್ದರೂ ಮೇ ೧೦ರ ತನಕ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಈಗ ಮೂಡಿದೆ.ಏಕೆಂದರೆ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ, ಬ್ಲ್ಯಾಕ್‌ಮೇಲ್ ಮಾಡಿದ ಹಾಗೂ ಬೆದರಿಕೆ ಹಾಕಿದ ಗಂಭೀರ ಆರೋಪ ಅವರ ಮೇಲಿದೆ.
ಏಪ್ರಿಲ್ ೧ರಂದು ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಈವರೆಗೆ ಸಮಸ್ಯೆಗೆ ಸಿಲುಕದಿದ್ದ ದೇವರಾಜೇಗೌಡರಿಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದೇ ಮುಳುವಾಗಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.
ಪ್ರಜ್ವಲ್ ಪ್ರಕರಣಕ್ಕೆ ಹೊಸ ತಿರುವು
ಸಂಸದ ಪ್ರಜ್ವಲ್‌ರೇವಣ್ಣ ಅಶ್ಲೀಲ ವೀಡಿಯೊ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗ ಈ ಪ್ರಕರಣದಲ್ಲಿಬಂಧನಕ್ಕೊಳಗಾಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮತ್ತು ಮಾಜಿ ಸಂಸದ ಶಿವರಾಮೇಗೌಡ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಇದೀಗ ವೈರಲ್ ಆಗಿದೆ.
ಈ ಸಂಭಾಷಣೆಯಲ್ಲಿ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅವರು ಮಾಹಿತಿ ಕೇಳಿದರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಡ ಎಂದು ಶಿವರಾಮೇಗೌಡ ದೇವರಾಜೇಗೌಡ ಅವರಿಗೆ ಹೇಳುತ್ತಾರೆ. ಈ ವೀಡಿಯೋ ಸಂಭಾಷಣೆ ರಾಜ್ಯರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ದೇವರಾಜೇಗೌಡ ನಮಗೆ ಎಸ್‌ಐಟಿ ಅವರು ನೋಟಿಸ್ ಕೊಡುತ್ತಾರಾ ಅದಕ್ಕೆ ಶಿವರಾಮೇಗೌಡ ಕೊಡುತ್ತಾರೆ. ಅಲ್ಲಿ ಏನೂ ಮಾತಾಡೋದು ಎಂದು ಕೇಳುತ್ತಾರೆ. ಇದಕ್ಕೆ ಶಿವರಾಮೇಗೌಡ ಅವರು ಎಸ್‌ಐಟಿ ಅವರು ನೋಟಿಸ್ ಕೊಟ್ಟಾಗಲೂ ಡಿಕೆಶಿ ಬಗ್ಗೆ ಚಕಾರ ಎತ್ತಬೇಡ ಎಂದಾಗ ದೇವರಾಜೇಗೌಡ ಸರಿ ಸರಿ ಅಣ್ಣಾ ಎಂದು ಹೇಳುತ್ತಾರೆ. ಈ ಸಂಭಾಷಣೆ ೩೬ ಸೆಕೆಂಡುಗಳಿವೆ.