ಗೌರ್‍ನರ್ ಕ್ರಮ ಸಿಂಧು
ಮುಡಾ ಹಗರಣ ಸಿಎಂ ತಕರಾರು ಅರ್ಜಿ ವಜಾ, ರಾಜ್ಯಪಾಲರ ಆದೇಶದಲ್ಲಿ ಲೋಪವಿಲ್ಲ: ನ್ಯಾಯಾಲಯ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೨೪:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನಿನ ಹೋರಾಟದಲ್ಲಿ ಹಿನ್ನಡೆಯಾಗಿದ್ದು, ಸಂಕಷ್ಟ ಎದುರಾಗಿದೆ.
ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯ ಪೀಠ ಇಂದು ತೀರ್ಪು ಪ್ರಕಟಿಸಿದ್ದು, ರಾಜ್ಯಪಾಲರ ತೀರ್ಮಾನವನ್ನು ಎತ್ತಿ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾ ಮಾಡಿದೆ.
ಮುಡಾ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದು ನ್ಯಾಯಾಲಯ ಹೇಳಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪಾಲಿಗೆ ದೊಡ್ಡ ಸಂಕಷ್ಟ ತಂದಿದೆ.
ಪ್ರಾಸಿಕ್ಯೂಷನ್ ಅನುಮತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಪ್ರಸನ್ನ ಅವರ ನ್ಯಾಯಪೀಠದ ಮುಂದೆ ವಾದ-ಪ್ರತಿವಾದಗಳು ಸಂಪೂರ್ಣಗೊಂಡು ನ್ಯಾಯಮೂರ್ತಿ ನಾಗಪ್ರಸನ್ನ ಅವರು ತೀರ್ಪನ್ನು ಕಾಯ್ದಿರಿಸಿದ್ದು, ಇಂದು ತೀರ್ಪು ಹೊರ ಬಿದ್ದಿದ್ದು, ರಾಜ್ಯಪಾಲರ ನಡೆಯನ್ನು ಹೈಕೋರ್ಟ್ ಸರಿ. ತನಿಖೆಗೆ ಆನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಿದೆ.
ರಾಜ್ಯ ಹೈಕೋರ್ಟಿನ ಈ ತೀರ್ಪು ರಾಜಕೀಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟಕ್ಕೆ ಸಿಲುಕಿಸಿದೆ. ಹಾಗೆಯೇ ಈ ತೀರ್ಪು ರಾಜ್ಯರಾಜಕೀಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೂ ಕಾರಣವಾಗುವ ಸಾಧ್ಯತೆಗಳು ಇವೆ.
ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟಿನ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರು ಮುಖ್ಯಮಂತ್ರಿ ಪರವಾಗಿ ವಾದ ಮಂಡಿಸಿದ್ದರು. ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್‌ಮೆಹ್ತಾ ವಾದ ಮಂಡಿಸಿದ್ದರು. ಹಾಗೆಯೇ ಈ ಪ್ರಕರಣದ ದೂರುದಾರರಾದ ಪಿ.ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್‌ಕುಮಾರ್ ಪರವಾಗಿಯೂ ಅವರವರ ವಕೀಲರು ವಾದ ಮಂಡಿಸಿದ್ದರು.
ಈ ವಾದ-ಪ್ರತಿವಾದ ಎಲ್ಲವನ್ನೂ ಆಲಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಇಂದು ತೀರ್ಪು ಪ್ರಕಟಿಸಿದರು.
ಏನಿದು ಹಗರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪತ್ನಿ ಪಾರ್ವತಿ ಅವರಿಗೆ ೧೪ ನಿವೇಶನಗಳನ್ನು ನೀಡಿರುವುದು ಕಾನೂನು ಬಾಹಿರ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ಈ ಮನವಿಯನ್ನು ಪರಿಶೀಲಿಸಿದ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.