ರೇಣುಕಾಸ್ವಾಮಿ ಹತ್ಯೆ: ದರ್ಶನ್ ವಿಚಾರಣೆ ಸೆ.27ಕ್ಕೆ, ಮೂವರಿಗೆ ಬಿಡುಗಡೆ ಭಾಗ್ಯ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ. 27ಕ್ಕೆ 57ನೇ ಸಿಸಿಹೆಚ್ ನ್ಯಾಯಾಲಯ ಮುಂದೂಡಿದೆ.‌
ಇದೇ ಪ್ರಕರಣದಲ್ಲಿ 15 , 17 ಕಾರ್ತಿಕ್, ನಿಖಿಲ್ ನಾಯಕ್ ಅವರಿಗೆ ಸಿಸಿಹೆಚ್ ನ್ಯಾಯಾಲಯ ಜಾಮೀನು ಕರುಣಿಸಿದೆ.
ಕೊಲೆ ಪ್ರಕರಣದ 16ನೇ ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ. ಹೈಕೋರ್ಟ್ನಲ್ಲಿ ಕೇಶವ ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರದಂತೆ ಹಾಗೂ ಒಬ್ಬರ ವೈಯಕ್ತಿಕ ಶ್ಯೂರಿಟಿ ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಈ ಮೂವರು ಆರೋಪಿಗಳು ತುಮಕೂರು ಕಾರಾಗೃಹದಲ್ಲಿದ್ದಾರೆ. ಹತ್ಯೆ ನಡೆದು ಮೂರು ತಿಂಗಳ ಬಳಿಕ ಮೊದಲ ಬಾರಿಗೆ ಪ್ರಕರಣದ ಆರೋಪಿಗಳಿಗೆ ಜಾಮೀನು ದೊರೆತಿದೆ.
ಇದೇ ವೇಳೆ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಿತು.
ನ್ಯಾಯಾಲಯ ಮುಂದೆ ವಿಶೇಷ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಕೂಡದು. ಅಲ್ಲದೆ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಮನವಿ ಆಲಿಸಿದ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ, ವಿಚಾರಣೆಯನ್ನು ‌ನ್ಯಾಯಾಧೀಶ ಜೈಶಂಕರ್ ವಿಚಾರಣೆಯನ್ನು ಸೆ.27 ಕ್ಕೆ ಮುಂದೂಡಿದರು.
ಪ್ರಕರಣದ ಒಂದನೇ ಆರೋಪಿ ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿದರು.