ಮುಡಾ ಹಗರಣ: ನಾಳೆ ಹೈಕೋರ್ಟ್ ನಿಂದ ತೀರ್ಪು: ಸಿಎಂ ಭವಿಷ್ಯ ನಿರ್ಧಾರ
ಬೆಂಗಳೂರು,ಸೆ.23- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ರಕರಣ ಕುರಿತಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪನ್ನು ಹೈಕೋರ್ಟ್‌ ನಾಳೆ ಪ್ರಕಟಿಸಲಿದೆ.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬರುತ್ತದೊ ಅಥವಾ ವಿರುದ್ಧವಾಗಿ ಬರಲಿದೆಯೋ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ಎಲ್ಲರ ಚಿತ್ತ ಹೈಕೋರ್ಟ್‌ನತ್ತ‌ ನೆಟ್ಟಿದೆ.
ಈಗಾಗಲೇ ಎರಡು ಕಡೆಯ ವಾದವನ್ನು ಆಲಿಸಿ ವಿಚಾರಣೆ ಮುಕ್ತಾಯಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಗೊಂಡ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತ್ತು. ನಾಳೆ ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದೆ.
ಸಿದ್ದರಾಮಯ್ಯ ಪರವಾಗಿ ಹಿರಿಯ ಸುಪ್ರೀಂ ಕೋರ್ಟ್‌ ವಕೀಲ ಅಭಿಷೇಕ್‌ ಮನು ಸಿಂಘ್ವಿ ಸೇರಿದಂತೆ ಹಲವು ಮಂದಿ ವಾದಿಸಿದ್ದರು.
ಮುಖ್ಯಮಂತ್ರಿಯವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು.
ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ನೀಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ, ಪಾರ್ವತಿಯವರಿಗೆ ದಾನವಾಗಿ ನೀಡಿದ್ದರು.
ಈ ಜಾಗವನ್ನು ಅಭಿವೃದ್ಧಿಗಾಗಿ ಪ್ರಾಧಿಕಾರ ಕಾನೂನು ಪ್ರಕಾರವೇ ವಶಪಡಿಸಿಕೊಂಡಿತ್ತು. 1998 ರಲ್ಲಿ ನೋಟಿಫೈ ಮಾಡಿತ್ತು. ಇದೇ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿ ಮಾಡಿದೆ.
ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಹೀಗಾಗಿ ಬದಲಿ ಭೂಮಿ ನೀಡುವಂತೆ 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರು. 2017ರಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಪಡಿಸದೇ ಇರುವ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ಸಿಎಂ ಪತ್ನಿ ಪಾರ್ವತಿ 2021ರಲ್ಲಿ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಸಿಎಂ ಪತ್ನಿ ಕೋರಿಕೆಯಂತೆ 2021ರಲ್ಲಿ 50:50 ಅನುಪಾತದಲ್ಲಿ ಭೂಮಿ ನೀಡಲಾಗಿದೆ.