ಕೇನ್ಸ್ ಚಲನ ಚಿತ್ರೋತ್ಸವಕ್ಕೆ ಐಶ್ವರ್ಯಾ ರೈ
ಮುಂಬೈ,ಮೇ.೯-ಭಾರತದ ಜನಪ್ರಿಯ ತಾರೆಯರಾದ ಐಶ್ವರ್ಯ ರೈ ಬಚ್ಚನ್ ಮತ್ತು ಅದಿತಿ ರಾವ್ ಹೈದರಿ ಮೇ ೧೪ ರಂದು ಪ್ರಾರಂಭವಾಗಲಿರುವ ಕೇನ್ಸ್ ಚಲನಚಿತ್ರೋತ್ಸವ ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ.
ಬಹುಭಾಷಾ ತಾರೆಯರಾದ ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಜಾಗತಿಕ ಬ್ಯೂಟಿ ಬ್ರ್ಯಾಂಡ್ ಪ್ರತಿನಿಧಿಸುವ ಈ ಇಬ್ಬರು ನಟಿಯರು ಫ್ರೆಂಚ್ ರಿವೇರಿಯಾದಲ್ಲಿ ನಡೆಯಲಿರುವ ಗ್ರ್ಯಾಂಡ್ ಈವೆಂಟ್‌ಗೆ ಹೆಜ್ಜೆ ಹಾಕಲಿದ್ದಾರೆ. ಈವೆಂಟ್‌ನ ೭೭ ನೇ ಆವೃತ್ತಿಗೆ ರೆಡ್ ಕಾರ್ಪೆಟ್ ಅಲಂಕರಿಸುವ ಅನೇಕ ಸೆಲೆಬ್ರಿಟಿಗಳಲ್ಲಿ ಅದಿತಿ ರಾವ್ ಹೈದರಿ ಕೂಡಾ ಒಬ್ಬಳು.
ಅದಿತಿ ಮೊದಲ ಬಾರಿಗೆ ೨೦೨೨ ರಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಐಶ್ ಆಗಾಗ್ಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ ವಿಶ್ವದ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ಚಿತ್ರದಲ್ಲಿ ಕಾಣಿಸಿಕೊಂಡ ಅದಿತಿ ರಾವ್ ಹೈದರಿ, ಮಹಿಳೆಯರು ತಮ್ಮ ಅನನ್ಯತೆಯನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಬೇಕು ಮತ್ತು ಪ್ರದರ್ಶಿಸಬೇಕು ಎಂದು ನಾನು ಬಲವಾಗಿ ಪ್ರತಿಪಾದಿಸುತ್ತೇನೆ ಎಂದು ಹೇಳಿದ್ದಾರೆ .ಪ್ರತಿಷ್ಠಿತ ಈವೆಂಟ್‌ನಲ್ಲಿ ಪಾಲ್ಗೊಳ್ಳುವ ಸಂತಸ ವ್ಯಕ್ತಪಡಿಸಿದ ಅವರು ಮಹಿಳಾ ಸಬಲೀಕರಣವನ್ನು ನಿರಂತರವಾಗಿ ಉತ್ತೇಜಿಸುವ ಬ್ರ್ಯಾಂಡ್‌ನೊಂದಿಗೆ ಕೆಲಸ ಮಾಡುವುದು ಗೌರವದ ಸಂಕೇತ ಎಂದು ಹೇಳಿದ್ದಾರೆ.
ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿ ಸಿನಿಮಾವನ್ನು ಆಚರಿಸಲು ಗಣ್ಯರನ್ನು ಒಟ್ಟುಗೂಡಿಸಿ ಕ್ಯಾನೆಸ್ ಚಲನಚಿತ್ರೋತ್ಸವ ನಡೆಸುತ್ತದೆ. ಡೆಮಿ ಮೂರ್, ಮೆರಿಲ್ ಸ್ಟ್ರೀಪ್ ಮತ್ತು ಜಾರ್ಜ್ ಲ್ಯೂಕಾಸ್ ಸೇರಿದಂತೆ ಹಾಲಿವುಡ್ ತಾರೆಯರು ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ. ಮೇ ೧೪ರಂದು ಕೇನ್ಸ್ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮೇ ೨೫ರವರೆಗೆ ಕಾರ್ಯಕ್ರಮ ನಡೆಯಲಿದೆ.