ಬಂಧನಕ್ಕೆ ಅನುಮಾನ ಕಾರಣವಲ್ಲ: ಸುಪ್ರೀಂ
ನವದೆಹಲಿ.ಮೇ.೧೦-ಕಸ್ಟಮ್ಸ್ ಕಾಯ್ದೆ, ಜಿಎಸ್ಟಿ ಕಾಯ್ದೆ ವಿವಿಧ ನಿಬಂಧನೆ ಸಂಬಂಧ ಸೂಕ್ತ ಪುರಾವೆಗಳ ಆಧಾರದ ಮೇಲೆ ಬಂಧನ ಮಾಡಬೇಕು. ಕೇವಲ ಅನುಮಾನದಿಂದ ಮಾಡದೇ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸರಕು ಮತ್ತು ಸೇವಾ ತೆರಿಗೆ ಕುರಿತು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ನ ನ್ಯಾ. ಸಂಜೀವ್ ಖನ್ನಾ, ಎಂ.ಎಂ.ಸುಂದರೇಶ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠ,ಯಾವುದೇ ಬಂಧನವನ್ನು ಮಾಡುವಾಗ ಯಾವ ಆಧಾರದ ಮೇಲೆ ಬಂಧನ ಮಾಡಲಾಗಿದೆ ಎಂಬುದನ್ನು ಮ್ಯಾಜಿಸ್ಟ್ರೇಟ್ ಪರಿಶೀಲಿಸಬೇಕು. ಇದು (ಬಂಧನ) ಮ್ಯಾಜಿಸ್ಟ್ರೇಟ್ ದೃಢೀಕರಿಸಿದ ಮತ್ತು ಆಯುಕ್ತರು ಪರಿಶೀಲಿಸಬಹುದಾದ ಪುರಾವೆಗಳನ್ನು ಆಧರಿಸಿರಬೇಕು ಕಾಯ್ದೆಯಡಿ ಬಂಧನವನ್ನು ಕೇವಲ ಅನುಮಾನದ ಆಧಾರದ ಮೇಲೆ ಮಾಡಲಾಗುವುದಿಲ್ಲ, ಆದರೆ ಸರಿಯಾದ ತನಿಖೆಯ ನಂತರ ಮತ್ತು ಕಾನೂನಿನ ಅಡಿಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಎಂದು ನ್ಯಾಯಪೀಠ ತಿಳಿಸಿದೆ.
ಕಸ್ಟಮ್ಸ್, ಜಿಎಸ್ಟಿ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿ ೨೮೧ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಮೇ ೧೪ ರಂದು ವಿಚಾರಣೆ ಮುಂದುವರಿಯಲಿದ್ದು, ರಾಜು ಜಿಎಸ್ಟಿ ನಿಬಂಧನೆಗಳ ಬಗ್ಗೆ ವಾದಿಸಲಿದ್ದಾರೆ.ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎಸ್ ವಿ ರಾಜು ಹಾಜರಿದ್ದರು.