ಉಗ್ರರ ದಾಳಿ ೭ ಪಾಕ್‌ಕಾರ್ಮಿಕರ ಸಾವು
ಕ್ವೆಟ್ಟಾ(ಪಾಕಿಸ್ತಾನ),ಮೇ೯:ಅಪರಿಚಿತ ಬಂಧೂಕು ಧಾರಿಗಳು ಏಕಾಏಕಿ ವಸತಿ ಸಮುಚ್ಛಯದ ಮೇಲೆ ದಾಳಿ ಮಾಡಿದ ಹಿನ್ನೆಲೆ ೭ ಕಾರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದೆ.
ಪಾಕಿಸ್ತಾನದ ಗ್ವಾದರ್ ಪ್ರದೇಶದ ವಸತಿ ಸಮುಚ್ಛಯದಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಏಕಾಏಕಿ ಬಂಧೂಕು ದಾರಿಗಳು ಗುಂಡು ಹಾರಿಸಲು ಆರಂಭಿಸಿದ್ದಾರೆ. ಮಲಗಿದ್ದ ೭ ಕಾರ್ಮಿಕರು ಬಂಧೂಕು ಧಾರಿಗಳ ಗುಂಡಿಗೆ ಬಲಿಯಾಗಿದ್ದು, ಓರ್ವ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಎಲ್ಲ ಕಾರ್ಮಿಕರು ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಲುಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ಕಾರ್ಮಿಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಇದು ಮುಕ್ತ ಭಯೋತ್ಪಾದನೆ ಎಂದಿದ್ದಾರೆ.
ಮೃತ ಕಾರ್ಮಿಕರ ಕುಟುಂಬಕ್ಕೆ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು,ಕಾರ್ಮಿಕರ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದು, ಗುಂಡು ಹಾರಿಸಿದ ಭಯೋತ್ಪಾದಕರ ವಿರುದ್ಧ ಮೃಧುಧೋರಣೆ ಸಾಧ್ಯವಿಲ್ಲ. ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಲಿದೆ.ಅಮಾಯಕ ಕಾರ್ಮಿಕರ ಹತ್ಯೆ ಹೇಡಿತನದ ಕೃತ್ಯ. ಭಯೋತ್ಪಾದಕರನ್ನು ಎಲ್ಲಿದ್ದರೂ ಹುಡುಕಿ ಮಟ್ಟಹಾಕಲಾಗುವುದೆಂದು ತಿಳಿಸಿದ್ದಾರೆ.
ಕಳೆದ ತಿಂಗಳಷ್ಟೆ ಉಗ್ರರು ಬಲುಚಿಸ್ತಾನ ಪ್ರಾಂತ್ಯದಲ್ಲಿ ೧೧ ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.