ಗಾಜಾದ ನೀರು ಪೂರೈಕೆ ಸೌಲಭ್ಯಗಳ ಮೇಲೆ ಹಾನಿ
ಗಾಜಾ, ಮೇ ೯- ಹಮಾಸ್ ವಿರುದ್ಧ ಇಸ್ರೇಲ್ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ಅಲ್ಲಿನ ನೂರಕ್ಕೂ ಅಧಿಕ ನೀರು ಪೂರೈಕೆ ಘಟಕಗಳು ಹಾಗೂ ನೈಮರ್ಲ್ಯ ಸೌಲಭ್ಯಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿರುವ ಸಂಗತಿಯು ಬ್ರಿಟನ್ ಮೂಲದ ಖಾಸಗಿ ಮಾಧ್ಯಮ ನಡೆಸಿರುವ ಉಪಗ್ರಹ ವಿಶ್ಲೇಷಣೆಯಲ್ಲಿ ಬಯಲಾಗಿದೆ.
ಶುದ್ಧ ನೀರಿನ ಕೊರತೆ ಮತ್ತು ಸಂಸ್ಕರಿಸದ ಕೊಳಚೆನೀರಿನ ಹರಿವು ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಸಹಾಯ ಸಂಸ್ಥೆಗಳು ತಿಳಿಸಿವೆ. ಈ ನಡುವೆ ಭಯೋತ್ಪಾದಕ ಉದ್ದೇಶಗಳಿಗಾಗಿ ಹಮಾಸ್ ಸಿನಿಕತನದಿಂದ ನಾಗರಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿವೆ. ಗಾಜಾದಲ್ಲಿ ಶುದ್ಧ ನೀರಿನ ಪೂರೈಕೆ ಹಿಂದಿನಿಂದಲೂ ಸೀಮಿತ ಸಂಪನ್ಮೂಲವಾಗಿದ್ದು, ಅದರ ಪೂರೈಕೆಗಾಗಿ ಬೋರ್‌ವೆಲ್‌ಗಳು ಮತ್ತು ಇತರೆ ಘಟಕಗಳ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಭಿಸಿದೆ. ಆದರೆ ಅಕ್ಟೋಬರ್ ೭ ರಂದು ಹಮಾಸ್ ದಾಳಿ ಮಾಡಿದ ನಂತರ ಗಾಜಾದಲ್ಲಿ ಇಸ್ರೇಲ್ ತನ್ನ ಪ್ರತೀಕಾರವನ್ನು ಪ್ರಾರಂಭಿಸಿದಾಗಿನಿಂದ ಈ ಪ್ರಮುಖ ಸೌಲಭ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಾನಿಗೊಳಗಾಗಿದೆ ಅಥವಾ ನಾಶವಾಗಿದೆ ಎಂದು ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ. ಒಳಚರಂಡಿ ಮತ್ತು ರೋಗ ಹರಡುವಿಕೆಯನ್ನು ತಡೆಯಲು ನಿರ್ಣಾಯಕವಾಗಿರುವ ಆರು ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳ ಪೈಕಿ ನಾಲ್ಕು ಹಾನಿಗೊಳಗಾಗಿದೆ ಅಥವಾ ನಾಶವಾಗಿದೆ ಎಂದು ಕಂಡುಕೊಳ್ಳಲಾಗಿದೆ.
ಗಾಜಾದ ಕರಾವಳಿ ಮುನಿಸಿಪಾಲಿಟೀಸ್ ವಾಟರ್ ಯುಟಿಲಿಟಿ (ಸಿಎಂಬ್ಲ್ಯುಯು) ಒದಗಿಸಿದ ಸ್ಥಳಗಳ ಪಟ್ಟಿಯನ್ನು ಬಳಸಿಕೊಂಡು ನಾವು ವಿಶ್ಲೇಷಿಸಿದ ಆರಕ್ಕೂ ಹೆಚ್ಚು ನೀರು ಮತ್ತು ನೈರ್ಮಲ್ಯ ಸೌಲಭ್ಯಗಳ ಕೇಂದ್ರಗಳು ಕೂಡ ಸೇರಿವೆ ಎಂದು ವಿಶ್ಲೇಷಣೆ ತಿಳಿಸಿದೆ. ಒಂದು ಉಪಗ್ರಹ ಚಿತ್ರದಲ್ಲಿ ಗಾಜಾದ ದಕ್ಷಿಣದಲ್ಲಿರುವ ಖಾನ್ ಯೂನಿಸ್‌ನಲ್ಲಿ ಎರಡು ಹಾನಿಗೊಳಗಾದ ದೊಡ್ಡ ನೀರಿನ ಸಂಗ್ರಹ ಟ್ಯಾಂಕ್‌ಗಳನ್ನು ಕಾಣಬಹುದು. ಇನ್ನು ನೀರು ಮತ್ತು ನೈರ್ಮಲ್ಯ ಸೌಲಭ್ಯಗಳ ನಾಶವು ಜನಸಂಖ್ಯೆಗೆ ಹಾನಿಕಾರಕ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಿದೆ. ಅತಿಸಾರ ಕಾಯಿಲೆಯ ಪ್ರಮಾಣವು ತೀವ್ರ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ಬ್ರಿಟನ್‌ನ ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ ನಟಾಲಿ ರಾಬರ್ಟ್ಸ್ ತಿಳಿಸಿದ್ದಾರೆ.