೩ನೇ ಹಂತ ಚುನಾವಣೆ:ಶೇ.೬೪.೫ರಷ್ಟು ಮತದಾನ
ನವದೆಹಲಿ,ಮೇ೮- ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಿನ್ನೆ ೯೩ ಲೋಕಸಭಾ ಸ್ಥಾನಗಳಿಗೆ ನಡೆದಿದ್ದು ಒಟ್ಟಾರೆ ಶೇಕಡಾ ೬೪.೫ ರಷ್ಟು ಮತದಾನವಾಗಿದೆ. ೨೦೧೯ಕ್ಕೆ ಹೋಲಿಸಿದರೆ ಮತದಾನದ ಪ್ರಮಾಣ ಕಡಿಮೆಯಾಗಿದ್ದು ಚುನಾವಣಾ ಆಯೋಗ ಆತಂಕ ವ್ಯಕ್ತಪಡಿಸಿದೆ
ಮೊದಲ ಎರಡು ಹಂತಗಳಂತೆ, ಮೂರನೇ ಹಂತದಲ್ಲಿಯೂ ೨೦೧೯ ಕ್ಕೆ ಹೋಲಿಸಿದರೆ ಕಡಿಮೆ ಮತದಾನದ ಶೇಕಡಾವಾರು ದಾಖಲಾಗಿದೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದಿದೆ.
೨೦೧೯ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ ೬೬ರಷ್ಟು ಮತದಾನವಾಗಿತ್ತು. ನಿನ್ನೆ ನಡೆದ ಮತದಾನದಲ್ಲಿ ಶೇಕಡ ೬೪.೫ ರಷ್ಟು ಮತದಾನವಾಗಿದೆ. ಮತದಾನ ಪ್ರಮಾಣ ಹೆಚ್ಚಳ ಮಾಡಲು ಹಲವು ಕ್ರಮ ಕೈಗೊಂಡರೂ ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ
೨೦೧೯ ರಲ್ಲಿ ಅಸ್ಸಾಂನಲ್ಲಿ ಶೇಕಡಾ ೮೧.೭ ರಷ್ಟು ಮತದಾನ ನಡೆದಿತ್ತು. ಆದರೆ ಈ ಬಾರಿ ಅಲ್ಲಿಯೂ ಕಡಿಮೆಯಾಗಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಉತ್ತರ ಪ್ರದೇಶದ ೧೦ ಸ್ಥಾನಗಳಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ೨೦೧೯ ರಲ್ಲಿ ಶೇಕಡ ೬೦ ಕ್ಕೆ ಹೋಲಿಸಿದರೆ ಈ ಬಾರಿ ಶೇಕಡಾ ೫೭.೩ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ
ಬಿಹಾರದಲ್ಲಿ ಶೇಕಡಾ ೫೮.೨ ರಷ್ಟು ಮತ್ತು ಗುಜರಾತ್ ನಲ್ಲಿ ಶೇಕಡಾ ೫೯.೨ ರಷ್ಟು ಮತದಾನವಾಗಿದೆ. ಗುಜರಾತ್‌ನಲ್ಲಿ ಸೂರತ್ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಅಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಎಲ್ಲಾ ಮೂರು ಹಂತಗಳಲ್ಲಿ ಮತದಾನದ ಶೇಕಡಾವಾರು ಕಡಿಮೆಯಾಗಿದೆ ಎಂದು ಸಮೀಕ್ಷೆ ವಿಶ್ಲೇಷಕರು ಹೇಳಿದ್ದಾರೆ. “ಚುನಾವಣಾ ಹಲವಾರು ಪ್ರಯತ್ನಗಳ ಹೊರತಾಗಿಯೂ ಮತದಾನದ ಪ್ರಮಾಣ ಇಳಿಕೆಯಾಗಿದೆ
ಛತ್ತೀಸ್‌ಗಢ, ಕರ್ನಾಟಕ ಮತ್ತು ಗೋವಾ ಮೂರನೇ ಹಂತದ ಮತದಾನದಲ್ಲಿ ಹೆಚ್ಚಳವಾಗಿರುವುದು ತುಸು ಹರ್ಷ ತಂದಿದೆ ಎಂದು ಚುನಾವಣಾ ಆಯೋಗ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.