ಎಚ್.ಡಿ ರೇವಣ್ಣ ತೀವ್ರ ವಿಚಾರಣೆ
ಬೆಂಗಳೂರು, ಮೇ.೬-ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಬಂಧಿತ ನಾಲ್ಕು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ವಿಶೇಷ ತನಿಖಾ ದಳ(ಎಸ್‌ಐಟಿ)ದ ಅಧಿಕಾರಿಗಳು ವಿಚಾರಣೆ ಯನ್ನು ತೀವ್ರಗೊಳಿಸಿದ್ದಾರೆ.
ಈ ಮಧ್ಯೆ ಇಂದು ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದು,ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಈ ಹಿಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದರಿಂದ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ ಇಂದು ಕೂಡ ಜಾಮೀನು ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಇನ್ನೂ ನಾಲ್ಕು ದಿನ ರೇವಣ್ಣ ಅವರು ಎಸ್‌ಐಟಿ ವಶದಲ್ಲಿರುವುದು ಅನಿವಾರ್ಯವಾಗಲಿದೆ.
ರೇವಣ್ಣ ಅವರನ್ನು ನಿನ್ನೆ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನಾಲ್ಕು ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ್ದಾರೆ. ಹೀಗಾಗಿ ತನಿಖಾ ಭಾಗವಾಗಿ ನಾಲ್ಕು ದಿನಗಳ ಕಾಲ ರೇವಣ್ಣ ಎಸ್‌ಐಟಿ ವಶದಲ್ಲಿ ಇರಲಿದ್ದಾರೆ.
ರೇವಣ್ಣ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರೆ ಎಸ್‌ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಕಸ್ಟಡಿಯಲ್ಲಿರುವ ಅವರಿಗೆ ಜಾಮೀನು ಕೊಟ್ಟರೆ ತನಿಖೆಗೆ ಹಿನ್ನೆಡೆಯಾಗಬಹುದು ಎಂದು ಎಸ್‌ಐಟಿ ವಾದ ಮಂಡಿಸಲಿದೆ. ಇದೇ ಕಾರಣಕ್ಕೆ ರೇವಣ್ಣ ಅವರಿಗೆ ಇಂದು ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕಸ್ಟಡಿ ಅವಧಿ ನಂತರವೇ ಜಾಮೀನು ಭಾಗ್ಯ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಒತ್ತಡದಲ್ಲಿ ರೇವಣ್ಣ:
ಇನ್ನು ಎಸ್‌ಐಟಿ ವಶದಲ್ಲಿರುವ ರೇವಣ್ಣ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಸುಸ್ತಾಗಿರುವಂತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಎಸ್‌ಐಟಿ ಅಧಿಕಾರಿಗಳು ಯಾವುದೇ ವಿಚಾರಣೆ ನಡೆಸಲಿಲ್ಲ. ಇಂದು ಬೆಳಗ್ಗೆ ಮತ್ತೆ ಪ್ರಕರಣದ ಬಗ್ಗೆ ಪ್ರಶ್ನಿಸಲಿದ್ದಾರೆ.
ರೇವಣ್ಣ ಬಂಧನವಾಗಿ ೨೪ ಗಂಟೆ ಕಳೆದರೂ ಅವರನ್ನು ಭೇಟಿಯಾಗಲು ಅವರ ಕುಟುಂಬಸ್ಥರು ಆಗಮಿಸಿಲ್ಲ. ಯಾವಾಗಲೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೇವಣ್ಣ ಬಂಧನದ ಬಳಿಕ ಸರಿಯಾಗಿ ನಿದ್ದೆ ಮಾಡದೇ ತಲೆ ಕೆಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳ ಮಹಜರು:
ಸ್ಥಳ ಮಹಜರಿಗೆ ರೇವಣ್ಣ ಅವರನ್ನು ಇಂದು ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆಯಿದೆ. ಇದೇ ವೇಳೆ ಸಂತ್ರಸ್ತೆಯನ್ನು ಅಕ್ರಮವಾಗಿ ಕೂಡಿಟ್ಟ ಸ್ಥಳ ತೋಟದ ಮನೆಯಲ್ಲಿಯೂ ಮಹಜರು ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ ಸಂತ್ರಸ್ತೆಯರಿಗಾಗಿ ಹೆಲ್ಪ್‌ಲೈನ್ ಆರಂಭಿಸಿರುವ ಎಸ್‌ಐಟಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಈ ಮಧ್ಯೆ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೊಗಳನ್ನು ಯಾರೇ ಆಗಲಿ ವಾಟ್ಸಾಪ್, ಫೇಸ್‌ಬುಕ್ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಕೆ ನೀಡಿದೆ.