ಕವಿತಾ ಜಾಮೀನು ಅರ್ಜಿ ವಜಾ
ನವದೆಹಲಿ, ಮೇ ೬- ಮದ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರ ಜಾಮೀನು ಅರ್ಜಿಯನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಇಂದು ತಿರಸ್ಕರಿಸಿದೆ.
ಭಾರತ ರಾಷ್ಟ್ರ ಸಮಿತಿಯ ಬೆಂಬಲಿಗರ ಪ್ರತಿಭಟನೆ ನಡುವೆಯೂ ತೆಲಂಗಾಣ ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ ೧೫ ರಂದು ಅವರ ಬಂಜಾರ ಹಿಲ್ಸ್ ನ ಅವರ ನಿವಾಸದಿಂದ ಬಂಧಿಸಲಾಗಿತ್ತು.
ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಮದ್ಯ ನೀತಿ ಪ್ರಕರಣಕ್ಕರ ಸಂಬಂಧಿಸಿದಂತೆ ಬಂಧನಲ್ಲಿರುವ ಕೆ. ಕವಿತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆ. ಕವಿತಾ ಅವರ ಹಸ್ತಕ್ಷೇಪ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಅವರನ್ನು ಮಾರ್ಚ್ ೧೫ಕ್ಕೆ ಬಂಧಿಸಿತ್ತು. ನಂತರ ತಿಹಾರ್ ಜೈಲಿನಲ್ಲಿರುವ ಕೆ. ಕವಿತಾ ಅವರನ್ನು ಏಪ್ರಿಲ್ ೧೫ ರಂದು ಸಿಬಿಐ ಬಂಧಿಸಿತ್ತು.
ಈ ಹಿಂದೆ ಬಿಎಸ್‌ಆರ್ ನಾಯಕ ಅರವಿಂದ್ ಫಾರ್ಮ್ ಪ್ರವರ್ತಕ ಚಂದ್ರಶೇಖರ್ ರೆಡ್ಡಿ ಅವರಿಗೆ ಈಗ ರದ್ದಾದ ಅಬಕಾರಿ ನೀತಿಯಡಿ ಸಂಸ್ಥೆಗೆ ನೀಡಲಾದ ೫ ಚಿಲ್ಲರೆ ವಲಯಗಳಿಗೆ ೨೫ ಕೋಟಿ ರೂ.ಗಳನ್ನು ಎಎಪಿ ಪಾವತಿಸುವಂತೆ ಸಿಬಿಐ ದೆಹಲಿ ನ್ಯಾಯಾಲಯಕ್ಕೆ ತಿಳಿಸಿತ್ತು.