ಕೈ ಸಚಿವರ ಆಪ್ತನ ಮನೆಯಲ್ಲಿ 15 ಕೋಟಿ ಜಪ್ತಿ
ರಾಂಚಿ(ಜಾರ್ಖಂಡ್), ಮೇ.೬-ಲೋಕಸಭಾ ಚುನಾವಣೆಯ ಸಮಯದಲ್ಲೇ ಭರ್ಜರಿ ಬೇಟೆಯಾಡಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಗರದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಕಂತೆ ಕಂತೆ ನೋಟುಗಳನ್ನು ಪತ್ತೆ ಮಾಡಿದ್ದಾರೆ.
ದಾಳಿಯ ವೇಳೆ ಅಧಿಕಾರಿಗಳು ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್ ನಾಯಕ ಆಲಂಗೀರ್ ಆಲಂ ಅವರ ವಯಕ್ತಿಕ ಕಾರ್ಯದರ್ಶಿ ಸಂಜೀವ್ ಲಾಲ್ ನಿವಾಸದಿಂದ ಸುಮಾರು ೨೫ ಕೋಟಿ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬ್ಯಾಗ್, ಕಮೋಡ್‌ಗಳಲ್ಲಿ ಹಣವನ್ನು ಸಂಗ್ರಹಿಸಲಾಗಿತ್ತು. ಹಣ ಎಣಿಕೆ ಕಾರ್ಯ ನಡೆಯುತ್ತಿದೆ. ಸದ್ಯ ಇಡಿ ತನಿಖೆ ನಡೆಸುತ್ತಿರುವ ವೀರೇಂದ್ರ ಕೆ ರಾಮ್ ಪ್ರಕರಣದ ಹಣ ಇದಾಗಿದೆ ಎಂದು ಇಡಿ ಹೇಳಿದೆ.
ಜಾರ್ಖಂಡ್‌ನಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದ ವೀರೇಂದ್ರ ಕೆ ರಾಮ್ ಅವರು ೧೦೦ ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ ಆರೋಪ ಬಂದಿದೆ.
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಆಗಿದ್ದ ವೀರೇಂದ್ರ ಕೆ ರಾಮ್ ಅವರನ್ನು ಫೆಬ್ರವರಿ ೨೦೨೩ ರಲ್ಲಿ ಇಡಿ ಬಂಧಿಸಿತ್ತು. ಕೆಲವು ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮ ಎಸಗಲು ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಇಡಿ ಬಂಧಿಸಿತ್ತು.
ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವ್ಯವಹಾರದ ವಿವರಗಳನ್ನು ಹೊಂದಿದ್ದ ಪೆನ್‌ಡ್ರೈವ್ ಅನ್ನು ವೀರೇಂದ್ರ ಕೆ ರಾಮ್‌ನಿಂದ ಬಳಿಯಿಂದ ಇಡಿ ಪಡೆದುಕೊಂಡಿದೆ.
ದಾಳಿ ವೇಳೆ ನಕಲಿ ಪ್ಯಾನ್ ಕಾರ್ಡ್‌ಗಳ ಮೂಲಕ ಶೆಲ್ ಕಂಪನಿಗಳನ್ನು ರಚಿಸುವುದರಿಂದ ಹಿಡಿದು ಚರ ಮತ್ತು ಸ್ಥಿರಾಸ್ತಿಗಳ ಖರೀದಿಗಾಗಿ ಕೋಟಿ ರೂ.ಗಳ ನಗದು ವಿನಿಮಯ ನಡೆಸಿದ ಮಾಹಿತಿಯೂ ಸಿಕ್ಕಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ನೋಟಿನ ರಾಶಿಯನ್ನು ತೋರಿಸುವ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ಈ ದಾಳಿಯ ಬಗ್ಗೆ ಮಾತನಾಡಿದ ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಾಹದೇವ್, ”ಜಾರ್ಖಂಡ್‌ನಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುತ್ತಿಲ್ಲ. ಈ ಹಣಗಳನ್ನು ಇವರು (ಕಾಂಗ್ರೆಸ್) ಚುನಾವಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜಾರ್ಖಂಡ್‌ನ ಮತ್ತೋರ್ವ ಬಿಜೆಪಿ ಸಂಸದ ದೀಪಕ್ ಪ್ರಕಾಶ್ ಮಾತನಾಡಿ, “ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ಆರ್‌ಜೆಡಿ ಜಾರ್ಖಂಡ್ ಅನ್ನು ‘ಲೂಟ್‌ಖಂಡ್ ಆಗಿ ಪರಿವರ್ತಿಸುವ ಕೆಲಸವನ್ನು ಮಾಡುತ್ತಿವೆ. ಇಂದು ಮತ್ತೆ ೨೫ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದ್ದು, ಅದು ಆಡಳಿತ ಪಕ್ಷದ ಸಚಿವರಿಗೆ ಸೇರಿದೆ. ಇದು ಜಾರ್ಖಂಡ್‌ನ ಜನರಿಗೆ ಮಾಡಿದ ಅವಮಾನ” ಎಂದು ವಾಗ್ದಾಳಿ ನಡೆಸಿದ್ದಾರೆ.
ವಿವಿಧ ಕಡೆ ದಾಳಿ:
ರಾಂಚಿಯ ಸೈಲ್ ಸಿಟಿ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಏಕಕಾಲದಲ್ಲಿ ದಾಳಿ ಕೈಗೊಂಡಿದೆ. ಇಡಿಯ ಒಂದು ತಂಡ ಸೋಮವಾರ ಬೆಳಗ್ಗೆ, ರಸ್ತೆ ನಿರ್ಮಾಣ ವಿಭಾಗದ ಇಂಜಿನಿಯರ್ ವಿಕಾಸ್ ಕುಮಾರ್ ಅವರ ಮನೆ ಮೇಲೂ ದಾಳಿ ನಡೆಸಿತ್ತು. ಇನ್ನೊಂದು ತಂಡ ಬರಿಯಾತು, ಮೊರಬದಿ ಮತ್ತು ಬೋಡಿಯಾ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಕಳೆದ ವರ್ಷ ಬಂಧಿತರಾದ ವೀರೇಂದ್ರ ರಾಮ್ ಅಕ್ಮವಾಗಿ ೧೦೦ ಕೋಟಿ ರೂ. ಮೌಲ್ಯದ ಆಸ್ತಿ ಗಳಿಸಿದ ಆರೋಪ ಹೊತ್ತಿದ್ದಾರೆ. ಜತೆಗೆ ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವಹಿವಾಟಿನ ವಿವರಗಳನ್ನು ಅವರಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.