“ಜೈಲ್ ಕಾ ಜವಾಬ್ ವೋಟ್ ಸೆ ದೇಂಗೆ” ಪ್ರಚಾರ ಗೀತೆಗೆ ಚುನಾವಣಾ ಆಯೋಗ ಅನುಮತಿ
ನವದೆಹಲಿ,ಮೇ.೪- ರಾಷ್ಟ್ರ ರಾಜಧಾನಿ ದೆಹಲಿಯ ಏಳು ಲೋಕಸಭಾ ಸ್ಥಾನಗಳಿಗೆ ಮೇ ೨೫ ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಎಎಪಿಯ “ಜೈಲ್ ಕಾ ಜವಾಬ್ ವೋಟ್ ಸೆ ದೇಂಗೆ” ಪ್ರಚಾರ ಗೀತೆಗೆ ಚುನಾವಣಾ ಆಯೋಗ ಅನುಮತಿ ನೀಡಿದೆ.
“ಜೈಲ್ ಕಾ ಜವಾಬ್ ವೋಟ್ ಸೆ ದೇಂಗೆ” ಮತದಾನದ ಮೂಲಕ ಜೈಲಿಗೆ ಹಾಕಿರುವುದಕ್ಕೆ ಉತ್ತರ ನೀಡುತ್ತೇವೆ ಎನ್ನುವ ರಾಪ್ ಶೈಲಿಯ ಪ್ರಚಾರದ ಹಾಡಿಗೆ ಎಎಪಿ ಪಕ್ಷ ಕೆಲ ಮಾರ್ಪಾಡುಗಳನ್ನು ಮಾಡಿದ ನಂತರ ದೆಹಲಿಯ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಹಾಡು ಬಳಸಲು ಅನುಮತಿ ನೀಡಿದೆ.
ಚುನಾವಣಾ ಪ್ರಚಾರದ ಗೀತೆಗೆ ಎಎಪಿ ಶಾಸಕ ದಿಲೀಪ್ ಪಾಂಡೆ, ಹಾಡು ಬರೆದು ತಾವೇ ಹಾಡಿದ್ದಾರೆ. ಈ ಪ್ರಚಾರ ಗೀತೆಯಲ್ಲಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಭಾಷಣ, ಎಎಪಿ ನಾಯಕರ ಹೋರಾಟ, ಜೈಲಿಗೆ ಹಾಕುವುದು ಸೇರಿದಂತೆ ವಿವಿಧ ವಿಷಯಗಳನ್ನು ಯುವ ಸಮುದಾಯ ರಾಪ್ ಶೈಲಿಯ ವಿಡಿಯೋದಲ್ಲಿ ಕಾಣಿಸಿಕೊಂಡಿದೆ
ಚುನಾವಣಾ ಆಯೋಗ ತನ್ನ ಪ್ರಚಾರ ಗೀತೆ “ಜೈಲ್ ಕಾ ಜವಾಬ್ ವೋಟ್ ಸೆ ದೇಂಗೆ ” ಅನ್ನು ನಿಷೇಧಿಸಿತ್ತು. ಆ ಬಳಿಕ ಕೆಲ ಮಾರ್ಪಾಟು ಮಾಡಿ ತಮ್ಮ ಅನುಮತಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದೆಹಲಿ ಚುನಾವಣಾ ಆಯೋಗದ ಅಧಿಕಾರಿಗಳು, ಚುನಾವಣಾ ಆಯೋಗದ ಮಾರ್ಗಸೂಚಿಗಳು ಮತ್ತು ಜಾಹೀರಾತು ನೀತಿ ಸಂಹಿತೆ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿ ಪ್ರಚಾರ ಗೀತೆಗೆ ಅನುಮತಿ ನೀಡಲಾಗಿದೆ
ಮಾರ್ಪಾಡುಗಳನ್ನು ಮಾಡಿದ ನಂತರ ಎಎಪಿ ತನ್ನ ಪ್ರಸ್ತಾವನೆಯನ್ನು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಗೆ ಸಲ್ಲಿಸಿತ್ತು. ಅದರ ನಂತರ ಹಾಡನ್ನು ಅನುಮೋದಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಶಾಸಕ ದಿಲೀಪ್ ಪಾಂಡೆ, “ಸತ್ಯಕ್ಕೆ ತೊಂದರೆ ನೀಡಬಹುದು ಆದರೆ ಸೋಲಿಸಲಾಗುವುದಿಲ್ಲ! “ಜೈಲ್ ಕಾ ಜವಾಬ್ ವೋಟ್ ಸೆ ದೇಂಗೆ” ಎಂಬುದು ಕೇವಲ ಎಎಪಿಯ ಪ್ರಚಾರ ಗೀತೆಯಲ್ಲ, ಆದರೆ ಇದು ಜನರ ಮನಸ್ಸಿನಲ್ಲಿ ನಡೆಯುತ್ತಿರುವ ಭಾವನೆಯ ಸಾರವಾಗಿದೆ. ದೇಶದ ಸಾಮಾನ್ಯ ಜನರ ಭಾವನೆಯೂ ಕೂಡ ಎಂದಿದ್ದಾರೆ
ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದ್ದು, ಚುನಾವಣಾ ಪ್ರಚಾರ ಗೀತೆಯನ್ನು ಚುನಾವಣೆಯಲ್ಲಿ ಬಳಸಿಕೊಳ್ಳಲು ಚುನಾವಣಾ ಆಯೋಗ ಅನುಮೋದನೆ ನೀಡಿದೆ. ಸತ್ಯಮೇವ ಜಯತೇ ಎಂದಿದ್ದಾರೆ.