ಅದಾನಿಯ ೭ ಕಂಪನಿಗಳಿಗೆ ಸೆಬಿ ನೋಟಿಸ್
ಮುಂಬೈ.ಮೇ,೪- ಅದಾನಿ ಸಮೂಹದ ಪಟ್ಟಿಯಲ್ಲಿರುವ ೧೦ ಕಂಪನಿಗಳ ಪೈಕಿ ಏಳು ಕಂಪನಿಗಳು ಸಂಬಂಧಿತ ಸಂಸ್ಥೆಗಳ ವಹಿವಾಟಿನ ನಿಯಮಗಳು ಸೇರಿದಂತೆ ನಿಯಮಗಳ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ-ಸೆಬಿ ಶೋಕಾಸ್ ನೋಟಿಸ್ ನೀಡಿದೆ.
ಮಾರುಕಟ್ಟೆ ನಿಯಂತ್ರಕ ಸಂಸ್ಥೆ- ಸೆಬಿ, ಅದಾನಿ ಎಂಟರ್ ಪ್ರೈಸಸ್, ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋಟ್ರ್ಸ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ವಿಲ್ಮರ್‌ಗೆ ನೋಟಿಸ್ ಕಳುಹಿಸಿದೆ.
ನೋಟಿಸ್‌ಗಳಲ್ಲಿ ಉಲ್ಲೇಖಿಸಲಾದ ಆರೋಪಗಳು ಸಾಬೀತಾದರೆ, ವಿತ್ತೀಯ ಅಥವಾ ಇತರ ದಂಡ ವಿಧಿಸಲಾಗುವುದು ಎಲ್ಲಾ ಏಳು ಕಂಪನಿಗಳಲ್ಲಿ, ಸೆಬಿಯ ಶೋಕಾಸ್ ನೋಟಿಸ್‌ಗಳನ್ನು ನಮೂದಿಸಿದ ನಂತರ ಲೆಕ್ಕಪರಿಶೋಧಕರು ವರದಿ ಪಡೆದು ನಂತರ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ
ಈ ಕುರಿತಂತೆ ಪ್ರತಿಕ್ರಿಯಿಸಿರುವ ಅದಾನಿ ಸಮೂಹ, ನೋಟಿಸ್ ಸ್ವೀಕಾರ ಮಾಡಲಾಗಿದೆ. ಇದರಿಂದ ವ್ಯವಹಾರಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಸುಮಾರು ಒಂದು ವರ್ಷದ ಹಿಂದೆ ಆರಂಭವಾದ ಮಾರುಕಟ್ಟೆ ನಿಯಂತ್ರಕದಿಂದ ಸುಪ್ರೀಂ ಕೋರ್ಟ್ ನಿರ್ದೇಶನದ ತನಿಖೆಯ ಬೆಳಕಿನಲ್ಲಿ ಏಳು ಅದಾನಿ ಕಂಪನಿಗಳಿಗೆ ನೋಟಿಸ್ ನೀಡಿರುವುದು ಮಹತ್ವ ಪಡೆದುಕೊಂಡಿದೆ
ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ, ಕೃತಕ ಷೇರು ಹೆಚ್ಚಳದ ಬಗ್ಗೆ ಅದಾನಿ ಗ್ರೂಪ್ ಕಂಪನಿಗಳ ವಿರುದ್ಧ ದೊಡ್ಡ ಆರೋಪ ಮಾಡಿತ್ತು, ಇದು ದೇಶ ವಿದೇಶದಲ್ಲಿ ಬಾರಿ ಸಂಚಲನಕ್ಕೂ ಕಾರಣವಾಗಿತ್ತು.
ಇದೀಗ ಅದಾನಿ ಸಮೂಹ, ತನ್ನ ಪ್ರಮುಖ ೭ ಕಂಪನಿಗಳ ವಹಿವಾಟುಗಳ ಬಗ್ಗೆ ನಿಖರ ಮಾಹಿತಿ ನೀಡಿದಂತೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣ ಬೆಳಕಿಗೆ ಬಂದರೂ ಆಶ್ಚರ್ಯವಿಲ್ಲ ಎನ್ನಲ್ಲಾಗಿದೆ
ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಲಾದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸೆಬಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.ಅದರ ಆಧಾರದ ಮೇಲೆ ತನಿಖೆ ಕೈಗೊಂಡ ವೇಳೆ ಈ ವಿಷಯ ಬೆಳಕಿಗೆ ಬಂದಿದೆ