ಮೇ 10 ರೊಳಗೆ ಪ್ರಜ್ವಲ್ ಹಾಜರು
ವಿದೇಶದಲ್ಲಿದ್ದುಕೊಂಡೇ ವಕೀಲರ ಜತೆ ಸಂಸದರ ಸಮಾಲೋಚನೆ:ಬಂಧನಕ್ಕೆ ಎಸ್‌ಐಟಿ ಸಿದ್ಧತೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ ೪:ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ರೇವಣ್ಣ ಮೇ ೧೦ರ ಒಳಗೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾಗುತ್ತಿದ್ದಂತೆಯೇ ವಿದೇಶಕ್ಕೆ ತೆರಳಿರುವ ಪ್ರಜ್ವಲ್‌ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ತಂಡ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದು, ಅವರ ವಿರುದ್ಧ ಲುಕೌಟ್ ನೋಟಿಸ್ ಸಹ ಜಾರಿ ಮಾಡಿತ್ತು.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ವಿದೇಶದಲ್ಲಿದ್ದುಕೊಂಡೇ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿರುವ ಪ್ರಜ್ವಲ್‌ರೇವಣ್ಣ ಅವರು, ವಕೀಲರ ಸಲಹೆಯಂತೆ ಈ ತಿಂಗಳ ೧೦ರ ಒಳಗೆ ದೇಶಕ್ಕೆ ವಾಪಸ್ಸಾಗಿ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವರು ಎಂದು ಹೇಳಲಾಗಿದೆ.
ಪ್ರಜ್ವಲ್‌ರೇವಣ್ಣ ವಿರುದ್ಧ ಸಂತ್ರಸ್ಥೆಯೊಬ್ಬರು ಅತ್ಯಾಚಾರದ ದೂರು ನೀಡಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಪ್ರಜ್ವಲ್‌ರೇವಣ್ಣ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ. ಅವರು ವಿದೇಶದಿಂದ ವಾಪಸ್ಸಾಗುತ್ತಿದ್ದಂತೆಯೇ ಅವರ ಬಂಧನಕ್ಕೂ ಎಸ್‌ಐಟಿ ತಯಾರಿ ನಡೆಸಿದೆ ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ಮಾಜಿ ಸಚಿವ ರೇವಣ್ಣ ಅವರ ಕುಟುಂಬಕ್ಕೆ ಆಪ್ತರಾದ ಸತೀಶ್ ಬಾಬಣ್ಣ ಅವರನ್ನೂ ಬಂಧಿಸಿ ವಿಚಾರಣೆಗೆ ಗುರಿಪಡಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೇವಣ್ಣ ಅವರಿಗೂ ಎಸ್‌ಐಟಿ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಎಸ್‌ಐಟಿ ನೋಟಿಸ್ ಹಿನ್ನೆಲೆಯಲ್ಲಿ ಹೆಚ್.ಡಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಯಲ್ಲಿದೆ. ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿದೆ.
ಎಸ್‌ಐಟಿ ತಂಡ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೆಚ್.ಡಿ ರೇವಣ್ಣ ಮತ್ತು ಪ್ರಜ್ವಲ್‌ರೇವಣ್ಣ ಅವರಿಗೆ ಸಂಬಂಧಿಸಿದ ೪೦ ಕಡೆ ದಾಳಿ ಸಹ ನಡೆಸಿ ಸಾಕ್ಷಿಗಳನ್ನು ಕಲೆ ಹಾಕಿದೆ. ಮಾಜಿ ಸಚಿವ ರೇವಣ್ಣ ಮತ್ತು ಪ್ರಜ್ವಲ್‌ರೇವಣ್ಣ ವಿರುದ್ಧ ೨ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳ ಬಗ್ಗೆ ಎಸ್‌ಐಟಿ ತಂಡ ತನಿಖೆ ನಡೆಸಿದೆ.
ಈ ಮಧ್ಯೆ, ದೇಶಾದ್ಯಂತ ಸದ್ದು ಮಾಡಿರುವ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧ ವಿದೇಶದಲ್ಲಿದ್ದುಕೊಂಡೇ ವಕೀಲರ ಸಲಹೆ ಪಡೆಯುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಮೇ ೧೦ರೊಳಗೆ ವಿಚಾರಣೆಗೆ ಹಾಜರಾಗಲು ನಿರ್ಧರಿಸಿರುವ ಬೆನ್ನಲ್ಲೇ ವಿಶೇಷ ತನಿಖಾ ತಂಡ(ಎಸ್ ಐಟಿ) ಅಧಿಕಾರಿಗಳು ವಿಚಾರಣೆಗೂ ಮುನ್ನವೇ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ.
ವಿದೇಶದಿಂದ ಪ್ರಜ್ವಲ್ ರೇವಣ್ಣ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಬಂಧಿಸಲು ಮುಂದಾಗಿರುವ ಎಸ್ ಐಟಿ ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಮೂರು ಗಂಭೀರವಾದ ಪ್ರಕರಣಗಳು ದಾಖಲಾಗಿರುವ ಜೊತೆಗೆ ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಮುಂದೆ ೧೬೪ ಸೆಕ್ಷನ್ ಅಡಿ ಹೇಳಿಕೆ ನೀಡಿರುವುದು,ಅಲ್ಲದೇ ನಿನ್ನೆ ಮತ್ತೊಬ್ಬ ಸಂತ್ರಸ್ತೆ ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿ,ಬ್ಲಾಕ್ ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ನಡೆಸಿರುವ ಕೃತ್ಯದ ವಿವರವಾದ ದೂರು ನೀಡಿರುವುದರಿಂದ ಪ್ರಜ್ವಲ್ ಬಂಧಿಸುವುದು ಅತ್ಯಗತ್ಯವಾಗಿದೆ.
ಪ್ರಜ್ವಲ್ ವಿರುದ್ಧದ ದೂರುಗಳು ಇಲ್ಲಿಯವರೆಗಿನ ತನಿಖೆಯ ಮಾಹಿತಿಯನ್ನು ಗೃಹಸಚಿವ ಪರಮೇಶ್ವರ್ ಅವರಿಗೆ ನೀಡಿರುವ ಎಸ್ ಐಟಿ ಮುಖ್ಯಸ್ಥ ಬಿಕೆ ಸಿಂಗ್ ಅವರು ಮುಂದಿನ ಕಾನೂನು ಪ್ರಕ್ರಿಯೆಯ ಸಮಾಲೋಚನೆ ನಡೆಸಿದ್ದು,ವಿಮಾನ ನಿಲ್ದಾಣಕ್ಕೆ ಬಂದ ಕೂಡ ಪ್ರಜ್ವಲ್ ಬಂಧಿಸುವುದು ಸನ್ನಿಹಿತವಾಗಿದೆ.
ಈ ನಡುವೆ ಕಳೆದ ಏ.೨೭ ರಂದು ವಿದೇಶಕ್ಕೆ ತೆರಳಿರುವ ಪ್ರಜ್ವಲ್ ವಿದೇಶದಲ್ಲಿದ್ದುಕೊಂಡೇ ಕಾನೂನು ತಜ್ಞರ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ದೆಹಲಿ, ಬೆಂಗಳೂರಿನ ನುರಿತ ವಕೀಲರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಈ ಮಧ್ಯೆ, ವಕೀಲರ ಸಲಹೆಯಂತೆ ಮೇ ೧೦ರೊಳಗೆ ದೇಶಕ್ಕೆ ಬಂದು ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಿವಾಸಕ್ಕೆ ಬೀಗ:
ಪ್ರಜ್ವಲ್ ರೇವಣ್ಣರ ಹಾಸನದ ನಿವಾಸದಲ್ಲೇ ನಿವಾಸದಲ್ಲೇ ಅತ್ಯಾಚಾರ ನಡೆದಿರುವ ಬಗ್ಗೆ ದೂರು ನೀಡಲಾಗಿರುವ ಹಿನ್ನೆಲೆಯಲ್ಲಿ, ಸಂಸದರ ನಿವಾಸದ ಗೇಟ್‌ಗೆ ನಿನ್ನೆ ಬೀಗ ಜಡಿಯಲಾಗಿದೆ.
ಇನ್ನೊಂದು ಕಡೆ ಲುಕೌಟ್ ನೋಟೀಸ್ ಹೊರಡಿಸಿದರೂ ಪ್ರಕರಣ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಮಾಜಿ ಸಚಿವ ಎಚ್‌ಡಿ ರೇವಣ್ಣ ತಲೆ ಮರೆಸಿಕೊಂಡಿದ್ದಾರೆ. ಭವಾನಿ ರೇವಣ್ಣ ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್ ಮಾಡಿದ್ದು ಅವರು ವಿಚಾರಣೆಗೆ ಹಾಜರಾಗುವುದು ಅನುಮಾನವಾಗಿದ್ದು,ವಕೀಲರ ಮೂಲಕ ವಿವರಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸಾಕ್ಷಿ ನಾಶದ ಆತಂಕ:
ಸಂಸದರ ನಿವಾಸದ ರೂಮ್‌ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರದ ದೂರು ನೀಡಿದ್ದ ಮಹಿಳೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಿಐಡಿ ಪೊಲೀಸರ ಮುಂದೆ, ಸಂಸದರ ನಿವಾಸದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ನೀಡಲಾಗಿದೆ. ಹೀಗಾಗಿ ಸಾಕ್ಷಿ ನಾಶದ ಆತಂಕದ ಹಿನ್ನೆಲೆಯಲ್ಲಿ ಸಂಸದರ ನಿವಾಸದ ಆವರಣಕ್ಕೆ ಪ್ರವೇಶ ನಿರ್ಬಂಧಿಸಿ ಗೇಟಿಗೆ ಬೀಗ ಹಾಕಲಾಗಿದೆ. ಎಸ್ ಐಟಿ ತಂಡ ತನಿಖೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸರು ಬೀಗ ಹಾಕಿದ್ದಾರೆ.
ಸ್ಥಳ ಮಹಜರು:
ಸಂಸದರ ನಿವಾಸಕ್ಕೂ ಬೀಗ ಬಿದ್ದಿದ್ದು, ಬೀಗದ ಕೀ ಯಾರ ಬಳಿ ಇದೆ ಎಂಬುದು ನಿಗೂಢವಾಗಿದೆ. ಇಂದು ಸಂತ್ರಸ್ತೆ ಜೊತೆ ಎಸ್ ಐಟಿ ತಂಡ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಆದರೆ ಕಳೆದೊಂದು ವಾರದಿಂದ ಸಂಸದರ ನಿವಾಸಕ್ಕೆ ಬೀಗ ಬಿದ್ದಿದ್ದು, ಮೇಟಿ ಕುಟುಂಬವೂ ಕಣ್ಮರೆಯಾಗಿದೆ. ಸ್ಥಳ ಮಹಜರಿಗೆ ಸಂಸದರ ಕಚೇರಿ ಬೀಗದ ಕೀ ಯಾರ ಬಳಿ ಇದೆ ಎಂಬುದು ಗೊತ್ತಾಗಿಲ್ಲ.
ಮಹತ್ವದ ದಾಖಲೆ:
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಸಂಬಂಧ ವಕೀಲ ಹಾಗೂ ಬಿಜೆಪಿ ಮುಖಂಡರೂ ಆದ ದೇವರಾಜೇಗೌಡ ನಿನ್ನೆ ಎಸ್‌ಐಟಿ ಎದುರು ಹಾಜರಾಗಿ ಪೆನ್ ಡ್ರೈವ್‌ನಲ್ಲಿದ್ದ ವಿಡಿಯೊಗಳ ಸೋರಿಕೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ.
ಲೈಂಗಿಕ ದೌರ್ಜನ್ಯ ವಿಡಿಯೊಗಳಿರುವ ಪೆನ್‌ಡ್ರೈವ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ದೇವರಾಜೇಗೌಡ ಎಸ್‌ಐಟಿ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದರು. ಇದಕ್ಕೆ ಪೂರಕ ದಾಖಲೆಗಳನ್ನು ನೀಡುವಂತೆ ಎಸ್‌ಐಟಿ ಸೂಚಿಸಿದ್ದ ಹಿನ್ನೆಲೆಯಲ್ಲಿ ನಿನ್ನೆಯೂ ಎಸ್‌ಐಟಿ ಅಧಿಕಾರಿಗಳ ಎದುರು ಹಾಜರಾಗಿ ಕೆಲ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ.
ಮಧ್ಯಾಹ್ನ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ಮಾಜಿ ಸಚಿವ ರೇವಣ್ಣ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೂಡಿದೆ.
ಮಾಜಿ ಸಚಿವ ರೇವಣ್ಣ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ ೨.೪೫ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೂಡಿರುವ ಬೆನ್ನಲ್ಲೇ
ಎಚ್.ಡಿ ರೇವಣ್ಣ ಅವರು ಯಾರಿಗೂ ಸಿಗದೇ ಗುಪ್ತ ಸ್ಥಳಕ್ಕೆ ತೆರಳಿದ್ದು, ಎರಡು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ.
ಪ್ರಕರಣದಲ್ಲಿ ರೇವಣ್ಣಗೆ ಎಸ್‌ಐಟಿ ಮೂರನೇ ನೋಟೀಸ್ ಹಾಗೂ ಕೊನೆಗೆ ಲುಕೌಟ್ ನೋಟೀಸ್ ಜಾರಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೇವಣ್ಣ ಅವರು ವಿದೇಶಕ್ಕೆ ಹಾರಬಹುದು ಎಂಬ ಮುಂದಾಲೋಚನೆಯಿಂದ ಲುಕೌಟ್ ನೋಟೀಸ್ ಜಾರಿ ಮಾಡಲಾಗಿದ್ದು, ಈಗ ಅವರು ಯಾವುದೇ ಏರ್‌ಪೋರ್ಟ್ ಮೂಲಕ ಹಾದು ಹೋಗಲು ಸಾಧ್ಯವಿಲ್ಲದಾಗಿದೆ.
ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್‌ಐಟಿ ಸಿದ್ಧತೆ ನಡೆಸಿದೆ.
ರೇವಣ್ಣ ವಿರುದ್ಧ ತನಿಖೆಗೆ ಒಳಗಾಗಬೇಕಾಗಿದ್ದು, ರೇವಣ್ಣ ಅತ್ತ ಎಚ್.ಡಿ ದೇವೇಗೌಡರ ನಿವಾಸದಲ್ಲಿಯಾಗಲೀ, ಇತ್ತ ಬಸವನಗುಡಿಯ ತಮ್ಮ ನಿವಾಸದಲ್ಲಿಯಾಗಲೀ, ಹಾಸನದ ಎರಡು ನಿವಾಸಗಳಲ್ಲಾಗಲೀ ಇಲ್ಲ.
ಹೀಗಾಗಿ ಅವರು ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿರಬಹುದು ಎಂದು ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.