ಅಶ್ಲೀಲ ಪೆನ್‌ಡ್ರೈವ್ ಬಹಿರಂಗಕ್ಕೆ ಕುಟುಂಬ ಕಲಹ ಕಾರಣ
ಬೆಂಗಳೂರು, ಮೇ ೫- ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹೊರ ಬರಲು ಕುಟುಂಬ ಕಲಹವೆ ಕಾರಣ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಆಂತರಿಕ ಕಲಹ ಈ ಪೆನ್‌ಡ್ರೈವ್ ಬಹಿರಂಗಕ್ಕೆ ಕಾರಣ. ಆವರ ಕುಟುಂಬ ಪಕ್ಷ ಆಂತರಿಕ ವಿಚಾರದಲ್ಲಿ ನಾನು ಹೆಚ್ಚು ಮಾತನಾಡಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ೭ನೇ ತಾರೀಖು ಆದ ಬಳಿಕ ಈ ಪೆನ್‌ಡ್ರೈವ್‌ಗೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ೭ ತಾರೀಖುವರೆಗೂ ಯಾಕೆ ಸಮಯ ವ್ಯರ್ಥ ಮಾಡುತ್ತಾರೆ. ಅಲ್ಲಿವರೆಗೂ ಕಾಯವುದು ಬೇಡ. ಅದೇನಿದ್ದರೂ ಈಗಲೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಅವರ ಕುಟಂಬದ ಕಲಹದಿಂದ ಇದೆಲ್ಲಾ ಹೊರ ಬಂದಿದೆ. ಸುಮ್ಮನೆ ಬೇರೆಯವರನ್ನು ದೂಷಿಸುವುದು ಸರಿಯಲ್ಲ ಎಂಬ ದಾಟಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಕುಮಾರಸ್ವಾಮಿ ಹೇಳಿದ್ದನ್ನು ನೆನಪು ಮಾಡಿಕೊಂಡರು.
ಈ ಪ್ರಕರಣದಲ್ಲಿ ತಪ್ಪು ಮಾಡಿದ್ದೇವೆ ಕ್ಷಮಿಸಿ ಎಂದು ಹೇಳಿದ್ದ ಕುಮಾರಸ್ವಾಮಿ ಹೆಚ್.ಡಿ. ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ ಎಂದು ಹೇಳಿದ್ದರು. ಆದರೆ ಈಗ ಅವರ ನಿಲುವಿನಲ್ಲಿ ಬದಲಾವಣೆಯಾಗಿದೆ ಏಕೆ ಎಂದು ಪ್ರಶ್ನಿಸಿದರು.
ಈ ಪೆನ್‌ಡ್ರೈವ್ ಹಿಂದೆ ಯಾರಿದ್ದಾರೆ, ಮುಂದೆ ಯಾರಿದ್ದಾರೆ ಇದಕ್ಕೆ ಕಾರಣ ಯಾರು ಎಲ್ಲವೂ ಕೂಡಾ ಗೊತ್ತಾಗುತ್ತದೆ. ನಾವು ಎಲ್ಲವನ್ನು ಬಿಚ್ಚಬೇಕಾ ಎಂದು ಮಾರ್ಮಿಕವಾಗಿ ಹೇಳಿದರು.
ಒಕ್ಕಲಿಗ ನಾಯಕತ್ವಕ್ಕಾಗಿ ಈ ಪೆನ್‌ಡ್ರೈವ್ ಹೊರಬಂದಿದೆ ಎಂಬ ಬಿಜೆಪಿ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿಯವರು, ಜೆಡಿಎಸ್‌ನವರು ಗಂಟೆಗೊಂದು, ಘಳಿಗೆಗೊಂದು ಮಾತನಾಡುತ್ತಿದ್ದಾರೆ. ನನಗೆ ಯಾವ ನಾಯಕತ್ವವೂ ಬೇಡ. ನಾನು ಒಕ್ಕಲಿಗ ನಾಯಕ ಅಂತ ಅನಿಸಿಕೊಳ್ಳಲು ಇಷ್ಟಪಡಲ್ಲ. ಆದರೆ ನಾನು ಒಕ್ಕಲಿಗ ಸಮುದಾಯದಲ್ಲೇ ಹುಟ್ಟಿದ್ದೇನೆ. ಆ ಸಮುದಾಯಕ್ಕೆ ಸೇವೆ ಮಾಡುತ್ತಾನೆ, ಅವರಿಗಾಗಿ ಕೆಲಸ ಮಾಡುತ್ತೇನೆ ಇದು ನನ್ನ ಕರ್ತವ್ಯ ಎಂದರು.
ಜೆಡಿಎಸ್‌ನ ಹಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಜೆಡಿಎಸ್‌ನ ಯಾವ ಶಾಸಕರೂ ನನ್ನ ಸಂಪರ್ಕದಲಿಲ್ಲ. ಇವೆಲ್ಲಾ ಊಹಾಪೂಹಾ ಅಷ್ಟೇ. ಪ್ರಜ್ವಲ್ ಪ್ರಕರಣದಿಂದ ಜೆಡಿಎಸ್‌ನ ಶಾಸಕರು ಬೇಸರಗೊಂಡಿರಬಹುದು ಅಷ್ಟೇ ಎಂದರು.
ಈ ತಿಂಗಳ ೭ ರಂದು ಚುನಾವಣೆ ನಡೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗಗಳಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.