ಪ್ರಜ್ವಲ್ ಲೈಂಗಿಕ ದೌರ್ಜನ್ಯ: ಸಂತ್ರಸ್ತೆಯರಿಗೆ ನೆರವು ಒದಗಿಸಿ
ನವದೆಹಲಿ,ಮೇ೪- ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ಕೃತ್ಯ ದೇಶ ತಲೆತಗ್ಗಿಸುವಂತಾಗಿದೆ. ವಿಷಯ ಮುಂಚೆಯೇ ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಯಾವುದೇ ಕ್ರಮ ಕೈಗೊಳ್ಳದಿರುವುದು ಅಂತ್ಯಂತ ಖಂಡನಾರ್ಹ ಎಂದಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಿ ನ್ಯಾಯ ಕೊಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಘೋರ ಅಪರಾಧಕ್ಕೆ ಕಠಿಣ ಶಿಕ್ಷೆ ಆಗಬೇಕಾಗಿದೆ. ಅನ್ಯಾಯಕ್ಕೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವುದು ಎಲ್ಲಾ ರಾಜಕೀಯ ಪಕ್ಷಗಳ ಕರ್ತವ್ಯ ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ:
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಹಲವಾರು ವರ್ಷಗಳಿಂದ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನ್ನು ಚಿತ್ರೀಕರಿಸಿದ್ದಾರೆ. ಸಹೋದರ ಮತ್ತು ಮಗನಂತೆ ನೋಡುತ್ತಿದ್ದ ಅನೇಕರೊಂದಿಗೆ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕ್ರೂರವಾಗಿ ನಡೆಸಿಕೊಂಡಿರುವುದನ್ನು ಖಂಡಿಸಿದ್ದಾರೆ.
೨೦೨೩ರ ಡಿಸೆಂಬರ್ ತಿಂಗಳಲ್ಲಿಯೇ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಜ್ವಲ್ ರೇವಣ್ಣ ಅವರ ಪೂರ್ವಾಪರಗಳು, ಅವರ ಲೈಂಗಿಕ ದೌರ್ಜನ್ಯದ ಇತಿಹಾಸ ಮತ್ತು ವೀಡಿಯೊಗಳ ಬಗ್ಗೆ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಆಘಾತಕಾರಿ ಸಂಗತಿ ಎಂದು ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತಂದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಮತ ನೀಡಿ ಎಂದು ಪ್ರಚಾರ ಮಾಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದ್ದು ತನಿಖೆಯ ಹಳಿ ತಪ್ಪಿಸಲು ಭಾರತದಿಂದ ಪಲಾಯನ ಮಾಡಲು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಅವಕಾಶ ನೀಡಿದೆ ಎಂದು ಆರೋಪಿಸಿದ್ದಾರೆ
ಈ ಅಪರಾಧಗಳ ಬಗ್ಗೆ ವಿಸ್ತೃತ ಮಾಹಿತಿ ಇದ್ದರೂ ಪ್ರಧಾನಿ ಮತ್ತು ಗೃಹ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಬದಲಾಗಿ ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂತ್ರಸ್ಥ ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯಕ್ಕಾಗಿ ಹೋರಾಡುವ ನೈತಿಕ ಕರ್ತವ್ಯ ಕಾಂಗ್ರೆಸ್ ಪಕ್ಷದ್ದಾಗಿದೆ. ಗಂಭೀರ ಆರೋಪಗಳ ತನಿಖೆಗಾಗಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ-ಎಸ್‌ಐಟಿ ರಚಿಸಿದೆ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿ ಅವರನ್ನು ಶೀಘ್ರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಪ್ರಧಾನಿಗೆ ಮನವಿ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ
ಬಾಕ್ಸ್
ಹೀನ ಕೃತ್ಯಕ್ಕೆ ಸಮರ್ಥನೆ
ತಮ್ಮ ಎರಡು ದಶಕಗಳ ಸಾರ್ವಜನಿಕ ಜೀವನದಲ್ಲಿ, ಮಹಿಳೆಯರ ಮೇಲೆ ಹೇಳಲಾಗದ ದೌರ್ಜನ್ಯದ ವಿರುದ್ಧ ನಿರಂತರವಾಗಿ ಮೌನವನ್ನು ಆರಿಸಿದ ನಾಯಕರನ್ನು ಎಂದಿಗೂ ನೋಡಿಲ್ಲ, ಇದೊಂದು ಹೀನ ಕೃತ್ಯ ಎಂದು ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದ್ಧಾರೆ
ಹರಿಯಾಣದ ಕುಸ್ತಿಪಟುಗಳಿಂದ ಹಿಡಿದು ಮಣಿಪುರದ ಸಹೋದರಿಯರವರೆಗೂ ಭಾರತೀಯ ಮಹಿಳೆಯರು ಅನುಭವಿಸಿದ ನೋವು ಯಾತನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದೂ ಅಲ್ಲದೆ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ