ಮತಾಂಧ ಶಕ್ತಿಗಳಿಗೆ ಕೈ ಕುಮ್ಮಕ್ಕು: ಬಿವೈವಿ ಕಿಡಿ
ಹುಬ್ಬಳ್ಳಿ, ಮೇ ೪: ರಾಜ್ಯದಲ್ಲಿ ಲವ್ ಜಿಹಾದ್ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಮತಾಂಧ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದೆ ಮೂಲ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಲವ್ ಜಿಹಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ದಲಿತ ಅಪ್ರಾಪ್ತ ಬಾಲಕಿ ಮೇಲೆ ಸದ್ದಾಂ ಹುಸೇನ ಎಂಬಾತ ಅತ್ಯಾಚಾರ ಮಾಡಿದ ಪ್ರಕರಣವೇ ಸಾಕ್ಷಿಯಾಗಿದೆ. ಇದು ಸಹ ಲವ್ ಜಿಹಾದ ಪ್ರಕರಣ ಭಾಗವಾಗಿದೆ ಎಂದು ಹರಿಹಾಯ್ದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಗೂ ನೇಹಾ ಹತ್ಯೆ ಆರೋಪಿಗಳನ್ನು ತಕ್ಷಣ ಒದ್ದು ಒಳಗೆ ಹಾಕಿದ್ದರೆ ಈಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮತಬ್ಯಾಂಕ್‌ಗಾಗಿ, ತೃಷ್ಟೀಕರಣ ಮಾಡಿದ್ದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಪೂರ್ಣವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇರಳ ಮಾದರಿಯಲ್ಲಿ ರಾಜ್ಯವಾಗುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು, ಸದ್ಯ ಚುನಾವಣಾ ಪ್ರಚಾರದಲ್ಲಿ ಪೆನ್‌ಡ್ರೈವ್ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ನಾವು ಖಂಡಿಸಿದ್ದೇವೆ ಎಂದರು.
ಅಮಿತ್ ಶಾ ಅವರು ಸಹ ಇಂತಹ ಪ್ರಕರಣ ಬೆಂಬಲಿಸಿಲ್ಲ. ಖಂಡಿಸುತ್ತೇವೆ ಎಂದಿದ್ದಾರೆ. ಈ ಪ್ರಕರಣ ಬಗ್ಗೆ ನಮಗೆ ಮುಂಚಿತವಾಗಿ ಗೊತ್ತಿರಲಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಯಾರೂ ಸಹ ಬೆಂಬಲಿಸಲು ಸಾಧ್ಯವಿಲ್ಲ ಎಂದ ಅವರು, ತಪ್ಪು ಮಾಡಿದವರಿಗೆ ಖಚಿತ ಶಿಕ್ಷೆ ಆಗುತ್ತದೆ ಎಂದರು.
ಪೆನ್‌ಡ್ರೈವ್ ಮೊದಲೇ ಕಾಂಗ್ರೆಸ್‌ನವರ ಕೈಗೆ ಸಿಕ್ಕಿತ್ತು. ಚುನಾವಣೆ ಮುಗಿಯುವವರೆಗೂ ಕಾಯ್ದು ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್‌ನವರು ಇದಕ್ಕೆ ಮೊದಲು ಉತ್ತರ ಕೊಡಬೇಕು ಎಂದರು.
ನಿನ್ನೆ ನಗರದಲ್ಲಿ ನಡೆದ ಅತ್ಯಾಚಾರ ಪ್ರಚರಣದಲ್ಲಿ ಆರೋಪಿ ಸದ್ದಾಂ ಹುಸೇನ್ ಪೊಲೀಸರ ಮೇಲೆ ಹಲ್ಲೆ ಮಾಡಲು ಹೋಗಿದ್ದಾನೆ. ಇಂತಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರವೇ ನಿರ್ಮಾಣ ಮಾಡಿದೆ. ಎಸ್‌ಸಿ,ಎಸ್‌ಟಿ ಮೀಸಲಾತಿಯಲ್ಲೂ ಅನ್ಯಾಯ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ನಿರೀಕ್ಷೆಗೂ ಮೀರಿ ಮತದಾರರು ನಮಗೆ ಸ್ಪಂದನೆ ಮಾಡುತ್ತಿದ್ದಾರೆ ಎಂದ ಅವರು, ದೇಶದ ಭದ್ರತೆ ಎನ್.ಡಿ.ಎ ಒಕ್ಕೂಟದಿಂದ ಮಾತ್ರ ಸಾಧ್ಯ ಎನ್ನುವ ಭಾವನೆ ಮತದಾರರಲ್ಲಿ ಬಂದಿದೆ ಎಂದು ನುಡಿದರು.