ರಾಯಚೂರು:ಬಿಸಿಲಿಗೆ ನಾಲ್ವರು ಬಲಿ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಮೇ ೪:ಜಿಲ್ಲೆಯಲ್ಲಿ ತಾಪಮಾನ ಮಿತಿ ಮೀರಿದ ಹಿನ್ನೆಲೆಯಲ್ಲಿ ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದಲ್ಲಿ ಓರ್ವ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇಡೀ ಗ್ರಾಮಸ್ಥರು ಕಂಗಾಲಾಗುವಂತೆ ಮಾಡಿದೆ. ಮೃತಪಟ್ಟವರನ್ನು ಹುಡಾ ಗ್ರಾಮದ ಪ್ರದೀಪ(೧೫), ಗಂಗಮ್ಮ ದೇವದಾಸಿ (೬೦), ದುರ್ಗಮ್ಮ (೬೦), ಹುಪ್ಪಾರ (೫೦) ಮೃತಪಟ್ಟವರೆಂದು ಗುರುತಿಸಲಾಗಿದೆ.
ವೀರೇಶ ಎನ್ನುವ ಹುಡಾ ಗ್ರಾಮದ ವ್ಯಕ್ತಿ ನಿನ್ನೆ ಮಧ್ಯಾಹ್ನ ಗ್ರಾಮದ ಹತ್ತಿರದ ಹಳ್ಳದ ಬಳಿ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಬಿಸಿಲಿನ ತಾಪಮಾನ ತಾಳಲಾರದೆ ಹಳ್ಳದ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಉಳಿದ ಮೂರು ಜನರು ಮನೆಯಲ್ಲಿದ್ದರೂ ಸಹ ಬಿಸಿಲಿನ ಝಳ ತಾಳಲಾರದೆ ಮನೆಯಲ್ಲೇ ಸಾವನ್ನಪ್ಪಿದ್ದಾರೆಂದು ಗ್ರಾಮಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹುಡಾ ಗ್ರಾಮ ವ್ಯಾಪ್ತಿಯಲ್ಲಿ ನಿನ್ನೆ ೪೫ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಈ ತಾಪಮಾನ ತಾಳಲಾರದೆ ಗ್ರಾಮದ ನಾಲ್ವರು ಮೃತಪಟ್ಟಿದ್ದು, ಗ್ರಾಮಸ್ಥರನ್ನು ಕಂಗಾಲಾಗುವಂತೆ ಮಾಡಿದೆ.
ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ನಾಲ್ಕು ಜನರು ಬಿಸಿಲಿಗೆ ಮೃತಪಟ್ಟ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಆತಂಕಗೊಂಡು ಹುಡಾ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಗ್ರಾಮೀಣ ಪೊಲೀಸರು, ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕಾಗಮಿಸಿ ಪಂಚನಾಮೆ ನಡೆಸಿದ್ದಾರೆ. ತಾಲ್ಲೂಕು ಸಾರ್ವಜನಿಕ ಅಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಸಾಗಿಸಲಾಗಿದೆ.