ರಾಯ್‌ಬರೇಲಿಯಲ್ಲಿ ಸೋತು ರಾಹುಲ್ ಕ್ಷೇತ್ರ ತೊರೆಯಲಿದ್ದಾರೆ
ರಾಯ್‌ಬರೇಲಿ,ಮೇ ೩:ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಸ್ಪರ್ಧಿಸುವ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಚುನಾವಣೆ ನಂತರ ಸೋತು ಕ್ಷೇತ್ರವನ್ನು ತೊರೆಯಲಿದ್ದಾರೆಂದು ಬಿಜೆಪಿ ವ್ಯಂಗ್ಯವಾಡಿದೆ.
ರಾಯ್‌ಬರೇಲಿ ಹಾಗೂ ಅಮೇಥಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿರುವ ಬೆನ್ನಲ್ಲೆ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ರಾಹುಲ್ ರಾಯ್‌ಬರೇಲಿ ಸ್ಪರ್ಧೆಯಿಂದ ಅವರ ರಾಜಕೀಯ ಭವಿಷ್ಯ ಕೊನೆಯ ಮೊಘಲ್‌ಚಕ್ರವರ್ತಿ ಬಹದ್ದೂರ್ ಜಾಫರ್‌ನಂತೆ ಅಂತ್ಯಗೊಳ್ಳಲಿದೆ ಎಂದು ಗೇಲಿ ಮಾಡಿದೆ.
ರಾಹುಲ್‌ಗಾಂಧಿ ತಮ್ಮ ತಾಯಿ ಸೋನಿಯಾಗಾಂಧಿ ಅವರ ಹಿಂದಿನ ಕ್ಷೇತ್ರ ರಾಯ್‌ಬರೇಲಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಇಂದು ಘೋಷಿಸಿದೆ.
ರಾಹುಲ್‌ಗಾಂಧಿ ಈ ಸ್ಪರ್ಧೆಯಿಂದ ರಾಯ್‌ಬರೇಲಿಯನ್ನು ತೊರೆಯಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಗಿರಿರಾಜ್‌ಸಿಂಗ್ ಗೇಲಿ ಮಾಡಿದ್ದಾರೆ.
ರಾಹುಲ್ ಅಮೇಥಿಯಲ್ಲಿ ಸ್ಪರ್ಧಿಸಿದ ನಂತರ ಅಮೇಥಿಯನ್ನು ತೊರೆದಿದ್ದಾರೆ. ಈ ಬಾರಿ ರಾಯ್‌ಬರೇಲಿಯಲ್ಲಿ ಸೋತರೆ ಅದನ್ನೂ ಸಹ ಬಿಟ್ಟು ಹೋಗಲಿದ್ದಾರೆ.
ಬಹದ್ದೂರ್ ಶಾ ಜಾಫರ್ ಮೊಘಲ್ ಸುಲ್ತಾನರ ಕೊನೆಯ ಚಕ್ರವರ್ತಿಗೆ ಆದ ಸಂದರ್ಭವನ್ನು ಗಾಂಧಿ ಕುಟುಂಬಕ್ಕೆ ರಾಯ್‌ಬರೇಲಿ ಸೋಲು ತಂದೊಡ್ಡಲಿದೆ ಎಂದು ಗಿರಿರಾಜ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಎಲ್ಲ ೮೦ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ.
ಈ ಬಾರಿ ಬಿಜೆಪಿ ಭಾರಿ ಬಹುಮತದೊಂದಿಗೆ ಗೆಲ್ಲಲಿದೆ. ಕಾಂಗ್ರೆಸ್‌ನಿಂದ ಅಮೇಥಿಯಲ್ಲಿ ಸ್ಪರ್ಧಿಸಲು ಯಾರೂ ಬಯಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಪ್ರಸ್ತುತ ರಾಹುಲ್ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಈ ಬಾರಿ ರಾಹುಲ್ ವಯನಾಡಿನಿಂದಲೂ ಸ್ಪರ್ಧಿಸಿದ್ದಾರೆ.