ಮೋದಿ ವಿರುದ್ಧ ಹಾಸ್ಯನಟ ಶ್ಯಾಮ್ ಸ್ಪರ್ಧೆ
ವಾರಣಸಿ,ಮೇ.೨-ಉತ್ತರ ಪ್ರದೇಶದ ವಾರಣಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹಾಸ್ಯ ನಟ ಶ್ಯಾಮ್ ರಂಗೀಲಾ ಸ್ಪಷ್ಟಪಡಿಸಿದ್ದಾರೆ.
ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನುಯಾಯಿಗಳನ್ನು ಅಭಿಪ್ರಾಯ ಪಡೆದಿದ್ದರು. ಅವರ ಅಭಿಪ್ರಾಯದ ಆಧಾರ ಮೇಲೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ.
ಮಿಮಿಕ್ರಿ ಮತ್ತು ಸ್ಟಾಂಡ್ ಅಪ್ ಕಾಮಿಡಿಗೆ ಹೆಸರಾದ ಹಾಸ್ಯನಟ ಶ್ಯಾಮ್ ರಂಗೀಲಾ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸುವುದಾಗಿ ಅವರು ಘೋಷಿಸಿದ್ದಾರೆ
ವಿಡಿಯೋ ಸಂದೇಶದಲ್ಲಿ ಅವರು ಶ್ಯಾಮ್ ರಂಗೀಲಾ ಅವರು ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವ ಉದ್ದೇಶವನ್ನು ಖಚಿತಪಡಿಸಿದ್ದಾರೆ, ತಮಾಷೆ ಮಾಡುತ್ತಿಲ್ಲ, ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಸ್ಪರ್ಧೆ ಮಾಡುತ್ತಿರುವೆ ಎಂದು ಅವರು ಹೇಳಿದ್ದಾರೆ.
ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸುವ ಘೋಷಣೆಯ ನಂತರ ನಿಮ್ಮೆಲ್ಲರಿಂದ ನನಗೆ ಸಿಗುತ್ತಿರುವ ಪ್ರೀತಿಯಿಂದ ಉತ್ಸುಕನಾಗಿದ್ದೇನೆ. ವಾರಣಾಸಿಗೆ ತಲುಪಿದ ನಂತರ ನಾಮನಿರ್ದೇಶನ ಮತ್ತು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅಭಿಪ್ರಾಯಗಳನ್ನು ಶೀಘ್ರದಲ್ಲೇ ಮತ್ತೊಂದು ವೀಡಿಯೊ ಸಂದೇಶದ ಮೂಲಕ ನಿಮ್ಮ ಮುಂದೆ ಮಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಯಾಕೆ ಸ್ಪರ್ದೆ ಮಾಡುತ್ತೀತಾ ಎನ್ನುವ ಪ್ರಶ್ನೆ ಎದುರಾಗಿರಬಹುದು ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು”ಚುನಾವಣೆಯಲ್ಲಿ ಸ್ಪರ್ಧಿಸುವ ನನ್ನ ನಿರ್ಧಾರದ ಹಿಂದೆ ಒಂದು ಕಾರಣವಿದೆ … ಇತ್ತೀಚೆಗೆ ಸೂರತ್‌ನಲ್ಲಿ, ಚಂಡೀಗಢ ಮತ್ತು ಇಂದೋರ್‍ನಲ್ಲಿ ಏನಾಯಿತು … ವಾರಣಾಸಿಯಲ್ಲೂ ಅಂತಹದ್ದೇನಾದರೂ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದಿದ್ದಾರೆ.
ಇದಕ್ಕೂ ಮುನ್ನ ಏಪ್ರಿಲ್ ೨೫ ರಂದು ಅವರು ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನುಯಾಯಿಗಳನ್ನು ಕೇಳಿದ್ದರು.
ಮೂಲತಃ ರಾಜಸ್ಥಾನದವರಾದ ೨೯ ವರ್ಷದ ಶ್ಯಾಮ್ ರಂಗೀಲಾ ಅವರು ೨೦೨೨ ರಲ್ಲಿ ಆಮ್ ಆದ್ಮಿ ಪಕ್ಷವನ್ನು ಸೇರುವ ಮೂಲಕ ಮೊದಲು ರಾಜಕೀಯಕ್ಕೆ ಪ್ರವೇಶಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಅಸಾಧಾರಣ ಅನುಕರಣೆಗಾಗಿ ವ್ಯಾಪಕ ಮನ್ನಣೆ ಗಳಿಸಿದ್ದಾರೆ.