ಅಮೆರಿಕ: ಪ್ಯಾಲೆಸ್ತೀನಿ ಪರ ಪ್ರತಿಭಟನೆ ಬಿಗಿ ಭದ್ರತೆ
ವಾಷಿಂಗ್ಟನ್,ಮೇ.೨- ಅಮೇರಿಕಾದ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯ, ಲಾಸ್ ಏಂಜಲೀಸ್ ಕ್ಯಾಂಪಸ್‌ನಲ್ಲಿ ಪ್ಯಾಲೇಸ್ತೀನಿಯನ್ ಪರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದು ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ಸೇನೆಯ ನಡುವೆ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧ ವಿರೋಧಿಸಿ ಅಮೇರಿಕಾದ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಹಿಂಸಾಸ್ಮಕ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಾರಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ, ಪ್ರದರ್ಶನಗಳ ಕೇಂದ್ರಬಿಂದುವಾಗಿದೆ ಪ್ರತಿಭಟನೆ ನಿಲ್ಲಿಸಲು ಪೊಲೀಸರು ಹರ ಸಾಹಸ ನಡೆಸಿದ್ದು ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ವಿದ್ಯಾರ್ಥಿಗಳು ಮೆರವಣಿಗೆ ಮಾಡಿದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದಾರೆ.
ಅಮೆರಿಕದ ಎರಡು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಹೆಲ್ಮೆಟ್ ಧರಿಸಿದ ಪೊಲೀಸರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಬಿಗುವಿನ ವಾತಾವರಣ ಸೃಷ್ಟಿ ಮಾಡಿದ್ದು ಕೆಲವು ವಿದ್ಯಾರ್ಥಿಗಳನ್ನು ದಿಗ್ಭ್ರಮೆಗೊಳಿಸಿದೆ.
ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮಾರ್ಕ್ ಟೆರ್ರೆ ಪ್ರತಿಕ್ರಿಯೆ ನೀಡಿ, ಕ್ಯಾಂಪಸ್‌ನಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಲಾಗುತ್ತದೆ ಎಂದು ಕನಸು ಮನಸಿನಲ್ಲಿಯೂ ಭಾವಿಸಿರಲಿಲ್ಲ.ದಿನದಿಂದ ದಿನಕ್ಕೆ ಹೆಚ್ಚು ಪೊಲೀಸರು ನಿಯೋಜನೆ ಗೊಳ್ಳುತ್ತಿರುವುದು ವಿಶ್ವವಿದ್ಯಾಲಯದ ಆವರಣದಲ್ಲಿ ಬಿಗುವಿನ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಕೊಲಂಬಿಯಾದಲ್ಲಿ ಮತ್ತು ಸಿಟಿ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನಲ್ಲಿ, ಪೊಲೀಸರು ರಾತ್ರೋರಾತ್ರಿ ಪ್ರತಿಭಟನಾಕಾರರನ್ನು ತೆರವುಗೊಳಿಸಿದರು, ಕೆಲವು ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಆಕ್ರಮಣಕಾರಿ ತಂತ್ರಗಳನ್ನು ಬಳಸಿದ್ದಾರೆ ಇದನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿಯೋರ್ವ,”ನಮ್ಮ ಮೇಲೆ ಹಲ್ಲೆ ನಡೆಸಿ, ಕ್ರೂರವಾಗಿ ಬಂಧಿಸಲಾಯಿತು. ಮತ್ತು ಬಿಡುಗಡೆ ಮಾಡುವ ಮೊದಲು ಆರು ಗಂಟೆಗಳ ಕಾಲ ಬಂಧಿಸಿ, ಸಾಕಷ್ಟು ಥಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುತ್ತಿದ್ದಂತೆ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಚಿಕಿತ್ಸೆ ನೀಡುತ್ತಿರುವ ಗಾಯದ ಘಟನೆಯನ್ನು ವಿವರಿಸಿದ್ದಾರೆ. ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.