ತಿಮ್ಮಪ್ಪನ ಸನ್ನಿಧಿ ಶುದ್ಧಿ
ಹೈದರಾಬಾದ್, ಸೆ. ೨೩-ದೇಶಾದ್ಯಂತ ವಿವಾದ ಬಿರುಗಾಳಿ ಎಬ್ಬಿಸಿದ್ದ ತಿರುಪತಿ ಲಾಡು ಪ್ರಸಾದದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಿಂದ ಅಪವಿತ್ರಗೊಂಡಿರುವ ತಿರುಮಲ ದೇವಾಲಯವನ್ನು ಇಂದು ಶುದ್ಧೀಕರಣ ಮಾಡಲಾಗಿದೆ.
ಲಾಡು ಸಿದ್ಧಪಡಿಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಸಂಪ್ರೋಕ್ಷಣಾ ಕಾರ್ಯದ ಭಾಗವಾಗಿ ಶಾಂತಿ ಹೋಮ ನಡೆಸಲು ತಿರುಪತಿ ದೇವಸ್ಥಾನಂ ತೀರ್ಮಾನಿಸಿತ್ತು. ಅದರಂತೆ ಇಂದು ತಿರುಪತಿಯಲ್ಲಿ ಶಾಂತಿ ಹೋಮ ನಡೆಸಲಾಗಿದ್ದು, ತಿಮ್ಮಪ್ಪನ ಗರ್ಭಗುಡಿ ದೇಗುಲ ಸುತ್ತ ಅರ್ಚಕರು ಪಂಚಗವ್ಯ ಪ್ರೋಕ್ಷಣೆ ಮಾಡಿದರು.
ಲಾಡು ತಯಾರಿಕೆಗೆ ಬಳಸುತ್ತಿದ್ದ ಜಾಗವನ್ನು ಶುದ್ಧೀಕರಣ ಮಾಡಲಾಗಿದ್ದು, ಅನ್ನ ಪ್ರಸಾದ ಸಿದ್ಧಪಡಿಸಿದ ಸ್ಥಳ ಸೇರಿದಂತೆ ದೇವಾಲಯದ ಆವರಣವನ್ನು ಶುದ್ಧೀಕರಣ ಮಾಡಲಾಗಿದೆ. ಶಾಂತಿ ಹೋಮದ ನಂತರ ವಾಸ್ತುಹೋಮವನ್ನು ನಡೆಸಲಾಯಿತು.
ಆಗಮ ಶಾಸ್ತ್ರದ ವಿಧ್ವಾಂಸರು ಮತ್ತು ಇತರ ತಜ್ಞರನ್ನೊಳಗೊಂಡ ವಿಶೇಷ ಸಮಿತಿಯು ಶುದ್ಧೀಕರಣಗೊಳಿಸುವ ವಿಧಿವಿಧಾನವನ್ನು ನೇರವೇರಿಸಲಾಯಿತು.
ನಾಲ್ಕು ಗಂಟೆಗಳ ಕಾಲ ಶಾಂತಿ ಹೋಮ, ಪಂಚಗವ್ಯ ಪ್ರೋಕ್ಷಣೆ ಶುದ್ಧೀಕರಣ ನಡೆಸಲಾಯಿತು. ತಿರುಪತಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೆ ಶುದ್ಧೀಕರಣ ನಡೆಸಲಾಗಿದೆ. ಮಧ್ಯಾಹದವರೆಗೂ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಪ್ರಮುಖರು ಭಾಗವಹಿಸಿದ್ದಾರೆ.
ಈ ಆಚರಣೆಯಿಂದ ಕೆಟ್ಟದ್ದು ನಿವಾರಣೆಯಾಗಿ ಭಕ್ತರ ಯೋಗಕ್ಷೇಮ ಜೊತೆಗೆ ಲಾಡುವಿನ ಪಾವಿತ್ರ್ಯತೆಯನ್ನು ಪುನರ್ ಸ್ಥಾಪಿಸುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಜೆ. ಶ್ಯಾಮಲಾ ರಾವ್ ತಿಳಿಸಿದರು.
ಲಾಡು ಪ್ರಸಾದ ತಯಾರಿಕೆ ವೇಳೆ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಿರುವ ಕುರಿತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಎಸ್‌ಐ ತನಿಖೆಗೆ ಆದೇಶಿಸಿದ್ದಾರೆ.
ಐಜಿ ಶ್ರೇಣಿಯ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಎಸ್‌ಐ ವರದಿಗಳ ಆಧಾರದ ಮೇಲೆ ಕಳಪೆ ಗುಣಮಟ್ಟದ ತಿರುಪತಿ ಲಾಡು ಅಪವಿತ್ರಕ್ಕೆ ಕಾರಣರಾದ ವಿರುದ್ಧ ಕಠಿಣ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೇವಾಲಯ ಮುಜರಾಯಿ ಇಲಾಖೆಯಿಂದ ಮುಕ್ತವಾಗಲಿ
ದೇವಾಲಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹಾಗೂ ಮಠಮಾನ್ಯಗಳನ್ನು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕೆಂದು ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಭುಧೇಂದ್ರ ತೀರ್ಥ ಸ್ವಾಮಿ ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸ್ವಾತಂತ್ರ ಪೂರ್ವದಲ್ಲಿ ಆಯಾ ದೇವಸ್ಥಾನ ಮಠಗಳ ಶಿಷ್ಯೆಯರು ಭಕ್ತರ ಸಮುದಾಯ ಮುಖಂಡರ ಮುಂದಾಳತ್ವದಲ್ಲಿ ನಿರ್ವಹಣೆ ಕಾರ್ಯ ನಡೆಯುತ್ತಿತ್ತು. ಈಗ ಲೌಕಿಕ ಕಾನೂನುಗಳಿಂದ ಈ ಆಚರಣೆ ಸರ್ಕಾರ ವಶದಲ್ಲಿದೆ ಎಂದು ಹೇಳಿದರು.
ರಾಜಕೀಯ ಹಿನ್ನೆಲೆಯಲ್ಲಿ ತಿರುಪತಿ ಲಾಡುವಿನಂತಹ ಪ್ರಕರಣಗಳಿಂದ ತೊಂದರೆಯಾಗುತ್ತವೆ ಎಂದು ಬೇಷರ ವ್ಯಕ್ತಪಡಿಸಿರುವ ಸ್ವಾಮೀಜಿ, ಮಠ, ದೇವಾಲಯಗಳು ಸ್ಥಳೀಯ ಜನರ ನೇತೃತ್ವದಲ್ಲಿ ನಡೆಯುವಂತಾಗಬೇಕು. ಇದಕ್ಕೆ ಸನಾತನ ಧರ್ಮ ಪರೀರಕ್ಷಣಾ ಸಂಬಂಧ ರೂಪಿಸುವ ಯೋಜನೆಗೆ ಬೆಂಬಲ ನೀಡುತ್ತೇವೆ.
ಈ ಎಲ್ಲವು ಮಠಾಧೀಶರ ನೇತೃತ್ವದಲ್ಲಿ ನಡೆಯಬೇಕು. ಹೀಗಾಗಿ ಮುಜರಾಯಿ ಇಲಾಖೆಯಿಂದ iಠ ಮಾನ್ಯಗಳ ದೇವಾಲಯ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮುಕ್ತವಾಗಬೇಕೆಂದು ಒತ್ತಾಯಿಸಿದರು.
ಶ್ರೀಗಳ ಮೌನವ್ರತ
ತಿರುಪತಿ ಪ್ರಸಾದದ ವಿಷಯದಲ್ಲಿ ನಡೆದ ಅಪವಿತ್ರ ಶುದ್ಧಿಗಾಗಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮಿಗಳು ಉಪವಾಸ ಹಾಗೂ ಮೌನ ವ್ರತ ಮಾಡಲಿದ್ದಾರೆ.
ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಹಾಗೂ ಮೀನಿನ ಎಣ್ಣೆ ಕಲಬೆರಕೆ ಅಪವಿತ್ರ ಶುದ್ಧಿಗಾಗಿ ಶ್ರೀಗಳು ಮೂರು ದಿನಗಳ ಕಾಲ ಉಪವಾಸ ಹಾಗೂ ಮೌನ ವ್ರತ ಕೈಗೊಳ್ಳಲಿದ್ದಾರೆ. ಆಗಿರುವ ಅಪಚಾರಕ್ಕೆ ಸಾರ್ವಜನಿಕರು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಶ್ರೀಗಳು ಕರೆ ನೀಡಿದ್ದಾರೆ.
ಯಾವುದೇ ಪುರೋಹಿತರ ಅಗತ್ಯವಿಲ್ಲದೇ ಸಾರ್ವಜನಿಕರು ಮನೆಯಲ್ಲಿಯೇ ಮೂರು ರೀತಿಯ ಸರಳ ಪ್ರಾಯಶ್ಚಿತ್ತ ವಿಧಾನ ಮಾಡಿಕೊಳ್ಳುವ ವಿಧಾನವನ್ನು ಸೂಚಿಸಿದ್ದಾರೆ.