ಸಂಜೆ ಅತಿಶಿ ಪ್ರಮಾಣವಚನ
ನವದೆಹಲಿ,ಸೆ.೨೧- ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕಾರ ಮಾಡಿದ್ದು ಎಎಪಿ ಶಾಸಕಾಂಗ ಪಕ್ಷದ ನಾಯಕಿ ಆತಿಶಿ ಅವರನ್ನು ನಿಯೋಜಿತ ಮುಖ್ಯಮಂತ್ರಿಯಾಗಿ ನೇಮಿಸಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಆತಿಶಿ ಇಂದು ಸಂಜೆ ಪ್ರಮಾಣವಚನ ಸ್ವೀಕಾರ ನಡೆಯಲಿದ್ದು ಮುಖ್ಯಮಂತ್ರಿ ಅವರ ಜೊತೆಗೆ ಐವರು ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಹೊಸ ಕ್ಯಾಬಿನೆಟ್‌ನಲ್ಲಿ ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್ ಮತ್ತು ಸುಲ್ತಾನ್‌ಪುರ ಮಜ್ರಾದಿಂದ ಮೊದಲ ಬಾರಿಗೆ ಶಾಸಕರಾದ ಮುಖೇಶ್ ಅಹ್ಲಾವತ್ ಸೇರಿದ್ದಾರೆ. ರಾಯ್, ಗೆಹ್ಲೋಟ್, ಭಾರದ್ವಾಜ್ ಮತ್ತು ಹುಸೇನ್ ಅವರು ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.
ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆಗೆ ಗೆಜೆಟ್ ಅಧಿಸೂಚನೆ ಸೇರಿದಂತೆ ಎಲ್ಲಾ ಔಪಚಾರಿಕತೆಗಳು ಪೂರ್ಣಗೊಂಡ ನಂತರ ಸಂಜೆ ೪:೩೦ ರ ಸುಮಾರಿಗೆ ನೂತನ ಮುಖ್ಯಮಂತ್ರಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ
ಅತಿಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವುದರ ಜೊತೆಗೆ, ದೆಹಲಿ ಸರ್ಕಾರದ ಭಾಗವಾಗಿರುವ ಐವರು ಹೊಸ ಸಚಿವರ ನೇಮಕಕ್ಕೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಅತಿಶಿ ಅವರ ಹೊಸ ಸಂಪುಟದ ಭಾಗವಾಗಿ ಅಧಿಕಾರ ವಹಿಸಿಕೊಳ್ಳಲು ಅವರ ಹೆಸರು ಅಂತಿಮಗೊಳಿಸಲಾಗಿದೆ