ಮಣಿಪುರಕ್ಕೆ ನುಸುಳಿದ ಕುಕಿ ಉಗ್ರರು
ಇಂಪಾಲ್,ಸೆ.೨೧-ಮ್ಯಾನ್ಮಾರ್‌ನಲ್ಲಿ ಸಶಸ್ತ್ರ ತರಬೇತಿ ಪಡೆದ ೯೦೦ ಕುಕಿ ಉಗ್ರರು ಮಣಿಪುರಕ್ಕೆ ನುಸುಳಿದ್ದಾರೆಯೇ? ಅವರು ಭಾರತೀಯ ಭದ್ರತಾ ಪಡೆಗಳು ಮತ್ತು ಎದುರಾಳಿ ಬಣಗಳ ಮೇಲೆ ಡ್ರೋನ್ ದಾಳಿಗಳನ್ನು ನಡೆಸುತ್ತಿದ್ದಾರೆಯೇ? ಎನ್ನುವ ಸಂದೇಹಗಳಿಗೆ ರಾಜ್ಯ ಸರ್ಕಾರ ಪ್ರಥಮ ಬಾರಿಗೆ ಸ್ಪಂದಿಸಿದೆ. ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಈ ವಿಷಯ ನೂರಕ್ಕೆ ನೂರರಷ್ಟು ಸತ್ಯ ಎಂದು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
ಕುಕಿ ಉಗ್ರರು ಮ್ಯಾನ್ಮಾರ್ ನಲ್ಲಿ ತರಬೇತಿ ಪಡೆದು ಮಣಿಪುರದೊಳಗೆ ನುಸುಳಿದ್ದರು. ಈ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳಿಂದ ರಹಸ್ಯ ಮಾಹಿತಿ ಲಭಿಸಿದೆ. ನಾವು ಅದನ್ನು ನಿರ್ಲಕ್ಷಿಸಲಾಗುವುದಿಲ್ಲ. ನಾವು ಹದ್ದಿನ ಕಣ್ಣಿಟ್ಟು ಎಲ್ಲ ರೀತಿಯ ರಕ್ಷಣೆಗೆ ಎಚ್ಚರಿಕೆ ವಹಿಸುತ್ತೇವೆ ಎಂದಿದ್ದಾರೆ.
ಈ ಗುಪ್ತಚರ ಮಾಹಿತಿ ಸಿಕ್ಕ ತಕ್ಷಣ ಮಣಿಪುರ-ಮ್ಯಾನ್ಮಾರ್ ಗಡಿಯಲ್ಲಿರುವ ಎಲ್ಲ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಎಲ್ಲರಿಗೂ ಮಾಹಿತಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಕುಕಿ ಉಗ್ರಗಾಮಿಗಳು ಮ್ಯಾನ್ಮಾರ್‌ನ ಕಾಡುಗಳಲ್ಲಿ ಡ್ರೋನ್ ಬಾಂಬ್ ಸ್ಫೋಟಗಳು, ಕ್ಷಿಪಣಿಗಳು ಮತ್ತು ಗೆರಿಲ್ಲಾ ಯುದ್ಧವನ್ನು ಕಲಿತಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಮಣಿಪುರದಾದ್ಯಂತ ಕುಕಿ ಉಗ್ರಗಾಮಿಗಳ ೩೦ ಗುಂಪುಗಳು ಅಡಗಿದ್ದು, ತಲಾ ೩೦ ಜನರಿದ್ದಾರೆ ಎಂದು ಹೇಳಲಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಕುಕಿ ಉಗ್ರರು ಮೈತೈ ಸಮುದಾಯದವರೇ ಹೆಚ್ಚಾಗಿರುವ ಗ್ರಾಮಗಳ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ನಿರೀಕ್ಷೆಯಿದೆ.