ಮತದಾನದ ಸಮಯ ವಿಸ್ತರಣೆ
ಹೈದರಾಬಾದ್,ಮೇ.೨-ತೆಲಂಗಾಣ ರಾಜ್ಯದಲ್ಲಿ ಚುನಾವಣಾ ಆಯೋಗವು ಮತದಾನದ ಸಮಯವನ್ನು ವಿಸ್ತರಿಸಿದೆ. ಬೆಳಗ್ಗೆ ೭ರಿಂದ ಸಂಜೆ ೬ರವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ತೀವ್ರ ಬಿಸಿಲು ಮತ್ತು ಆಲಿಕಲ್ಲು ಮಳೆಯಿಂದಾಗಿ ಮತದಾನದ ಸಮಯವನ್ನು ಇನ್ನೂ ಒಂದು ಗಂಟೆ ವಿಸ್ತರಿಸಲು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಮತದಾನ ಪ್ರಮಾಣ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂದು ಮುಖಂಡರು ಸಲಹೆ ನೀಡಿದ್ದಾರೆ.
ಪಕ್ಷಗಳ ಮನವಿಯನ್ನು ಪರಿಗಣಿಸಿ ತೆಲಂಗಾಣ ರಾಜ್ಯದ ೧೭ ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ ೬ ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡುವಂತೆ ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ಸಿಇಸಿಗೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಚುನಾವಣಾ ಆಯೋಗವು ಬೇಸಿಗೆಯ ಬಿಸಿ ಮತ್ತು ಆಲಿಕಲ್ಲು ಮಳೆಯ ಪರಿಣಾಮದಿಂದಾಗಿ ಮತದಾನವನ್ನು ಹೆಚ್ಚಿಸುವ ಕ್ರಮಗಳ ಭಾಗವಾಗಿ ಬೆಳಿಗ್ಗೆ ೭ ರಿಂದ ಸಂಜೆ ೬ ರವರೆಗೆ ಮತದಾನ ನಡೆಯಲಿದೆ ಎಂದು ಅಧಿಸೂಚನೆ ಹೊರಡಿಸಿದೆ.
ಸದ್ಯ ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ತಾಪಮಾನ ೪೫ ಡಿಗ್ರಿ ಮೀರಿದೆ. ಏಪ್ರಿಲ್ ಕೊನೆಯ ವಾರದಿಂದ ಪರಿಸ್ಥಿತಿ ಹದಗೆಟ್ಟಿದೆ. ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಿದೆ.
ಸಾಮಾನ್ಯವಾಗಿ ಚುನಾವಣಾ ಆಯೋಗವು ಬೆಳಿಗ್ಗೆ ೭ ರಿಂದ ಸಂಜೆ ೫ ರವರೆಗೆ ಮತದಾನವನ್ನು ನಡೆಸುತ್ತದೆ. ಮತದಾನದ ಅವಧಿ ಮುಗಿದ ನಂತರ ಈಗಾಗಲೇ ಸರತಿ ಸಾಲಿನಲ್ಲಿ ನಿಂತಿರುವ ಮತದಾರರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಮತ್ತು ನಕ್ಸಲ್ ಪೀಡಿತ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ. ಸದ್ಯ ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ.ರಾಜ್ಯದ ೧೭ ಸಂಸದ ಸ್ಥಾನಗಳ ಜೊತೆಗೆ ಇತ್ತೀಚೆಗೆ ಲಾಸ್ಯ ನಂದಿತಾ ಅವರ ನಿಧನದಿಂದ ತೆರವಾಗಿರುವ ಕಂಟೋನ್ಮೆಂಟ್ ಶಾಸಕ ಸ್ಥಾನಕ್ಕೆ ಮೇ ೧೩ ರಂದು ಚುನಾವಣೆ ನಡೆಯಲಿದೆ. ಮತ್ತೊಂದೆಡೆ, ೧೮ ನೇ ಲೋಕಸಭೆಯ ಜೊತೆಗೆ ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭಾ ಚುನಾವಣೆಗಳು ಒಂದೇ ದಿನ ನಡೆಯಲಿವೆ. ಜೂನ್ ೪ ರಂದು ದೇಶಾದ್ಯಂತ ಮತ ಎಣಿಕೆ ನಡೆಯಲಿದೆ.