೩೦ ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಬೆದರಿಕೆ, ಬಿಗಿ ಭದ್ರತೆ
ವಾರಾಣಸಿ,ಏ.೩೦:ಉತ್ತರ ಪ್ರದೇಶದ ವಾರಾಣಸಿ ಸೇರಿದಂತೆ ೩೦ ವಿಮಾನ ನಿಲ್ದಾಣಗಳಲ್ಲಿ ಸರಣಿ ಬಾಂಬ್‌ಸ್ಫೋಟ ನಡೆಸುವುದಾಗಿ ಇ-ಮೇಲ್ ಬೆದರಿಕೆ ಬಂದಿದೆ. ಇ-ಮೇಲ್ ಕಳುಹಿಸಿರುವ ಬಗ್ಗೆ ಭದ್ರತಾ ಸಿಬ್ಬಂದಿಗಳಿಗೆ ಯಾವುದೇ ಮಾಹಿತಿ ಲಭಿಸಿಲ್ಲ. ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಿಗೆ ಕಟ್ಟೆಚ್ಚರ ವಹಿಸುವುದರ ಜತೆಗೆ ಭದ್ರತೆ ಕೈಗೊಳ್ಳಲಾಗಿದೆ.
ವಿಮಾನನಿಲ್ದಾಣದಲ್ಲಿ ಬಾಂಬ್ ಅಳವಡಿಸಿ ರಿಮೋಟ್‌ನಲ್ಲಿ ಬಟನ್ ಒತ್ತಿದ ತಕ್ಷಣ ಬಾಂಬ್‌ಸ್ಫೋಟವಾಗಲಿದೆ ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.
ವಿಮಾನನಿಲ್ದಾಣಗಳಲ್ಲಿ ವ್ಯಾಪಕ ತಪಾಸಣೆ ಕೈಗೊಂಡರೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಆದರೂ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆದರಿಕೆ ಹಾಕಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಿನ್ನೆ ಸಂಜೆ ವಾರಾಣಸಿ ವಿಮಾನನಿಲ್ದಾಣದ ಅಧಿಕೃತ ಇ-ಮೇಲ್‌ಗೆ ಈ ಬೆದರಿಕೆ ಬಂದಿದೆ.
ತಕ್ಷಣವೇ ಜಾಗರೂಕರಾಗಿ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಿ ತಪಾಸಣೆ ಚುರುಕುಗೊಳಿಸಲಾಗಿದೆ. ಇ-ಮೇಲ್‌ನಲ್ಲಿ ಬೆದರಿಕೆ ಹಾಕಿರುವ ವ್ಯಕ್ತಿ ಯಾರು ಎಂಬ ಬಗ್ಗೆ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.