ಸಂಸದ ಪ್ರಜ್ವಲ್ ರೇವಣ್ಣ ಮಹಿಳಾ ದೌರ್ಜನ್ಯ ಪ್ರಕರಣ: ಮೋದಿ, ಅಮಿತ್ ಶಾ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಒತ್ತಾಯ
ಕಲಬುರಗಿ:ಏ.29: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಮಹಿಳಾ ದೌರ್ಜನ್ಯ ಪ್ರಕರಣದ ಕುರಿತು ಆರೋಪಿಯ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಒತ್ತಾಯಿಸಿದರು.
ಸೇಡಂ ಪಟ್ಟಣದ ಕ್ರೀಡಾಂಗಣದಲ್ಲಿ ಕಲಬುರ್ಗಿ ಮೀಸಲು ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಮೋದಿ ಸುಮ್ಮನೆ ಇದ್ದರು ಎಂದು ಆಕ್ರೋಶ ಹೊರಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಜತೆ ಇರುವ ವ್ಯಕ್ತಿ ಇಂದು ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅದೆ ವ್ಯಕ್ತಿಯ ಪರ ಮತಯಾಚಿಸಿದ್ದ ಮೋದಿ ಹಾಗೂ ಅಮಿತ್ ಶಾ ಉತ್ತರಿಸಿಲಿ ಎಂದು ಪ್ರಜ್ವಲ್ ರೇವಣ್ಣ ಹೆಸರು ಹೇಳದೇ ಒತ್ತಾಯಿಸಿದ ಅವರು, ಅದೇ ವ್ಯಕ್ತಿ ಯಾರಿಗೂ ಗೊತ್ತಾಗದಂತೆ ವಿಧೇಶಕಕ್ಕೆ ಪರಾರಿಯಾದ. ಮಂಗಲ ಸೂತ್ರದ ಬಗ್ಗೆ ಮಾತನಾಡುವ ಮೋದಿ ಈಗ ಏನು ಹೇಳುತ್ತಾರೆ? ಎಂದು ಖಾರವಾಗಿ ಪ್ರಶ್ನಿಸಿದರು.
ಈ ದೇಶದಲ್ಲಿ ಬಹಳಷ್ಟು ಪ್ರದಾನಿಗಳು ಆಗಿ ಹೋಗಿದ್ದಾರೆ. ಅವರೆಲ್ಲ ಸತ್ಯದ ಹಾದಿಯಲ್ಲಿ ನಡೆದಿದ್ದಾರೆ. ಆದರೆ ಮೋದಿ ಅವರು ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದ ಅವರು, ನಮ್ಮ ದೇಶ ಸತ್ಯಮೇವ ಜಯತೇ ಎನ್ನುವ ಮಾತನ್ನು ಅಕ್ಷರಶಃ ಪಾಲಿಸುವ ದೇಶವಾಗಿದೆ. ಮನೆಯಲ್ಲಿ ತಾಯಿ ಮಕ್ಕಳು ಸತ್ಯ ಹೇಳುವಂತೆ ಹೇಳುತ್ತಾಳೆ. ಮಹಾತ್ಮಾಗಾಂಧಿ ಕೂಡಾ ಸತ್ಯದ ಹಾದಿಯಲ್ಲೆ ನಡೆದರು. ರಾಜಕೀಯ ಕೂಡಾ ಸತ್ಯದ ದಾರಿಯಲ್ಲೇ ನಡೆದಿದೆ. ಕಾಂಗ್ರೆಸ್ ಪಕ್ಷ ಸತ್ಯದ ರಾಜಕೀಯದ ಹಾದಿಯಲ್ಲೇ ನಡೆದಿದೆ. ಆದರೆ ಕಳೆದ ಹತ್ತು ವರ್ಷಗಳಿಂದ ರಾಜಕೀಯದ ಹಾದಿ ಬದಲಾಗಿದೆ. ಇಲ್ಲಿ ಸತ್ಯಕ್ಕೆ ಜಾಗವಿಲ್ಲದಾಗಿದೆ ಎಂದು ಆತಂಕ ಹೊರಹಾಕಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಇಲ್ಲಿನ ಸಂಸದ ಒಂದು ರೈಲು ಬಿಡಿಸಿದ್ದು ಬಿಟ್ಟರೇ ಬೇರೆ ಏನು ಮಾಡಿಲ್ಲ ಎಂದು ಡಾ. ಉಮೇಶ್ ಜಾಧವ್ ಅವರ ಹೆಸರು ಹೇಳದೇ ಆರೋಪಿಸಿದ ಪ್ರಿಯಾಂಕಾ ಗಾಂಧಿ ಅವರು, ಕುಡಿಯುವ ನೀರಿಗೂ ಕೂಡಾ ಕಷ್ಟಪಡುವ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗವಿಲ್ಲದೇ ದೂರದ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ಯವಕರು ಸೇನೆಯಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿದ್ದರು ಆದರೆ ಅಗ್ನಿ ವೀರ್ ಯೋಜನೆ ಜಾರಿಗೆ ತಂದು ಸೈನ್ಯಕ್ಕೆ ಸೇರುವ ಯುವಕರಿಗೆ ಯಾವುದೇ ಭರವಸೆ ನೀಡಿಲ್ಲ. ರೈತರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕಪುಣ್ಣ ವ್ಯಾಪಾರಗಳಿಂದ ಜನರ ಜೀವನ ನಿರ್ವಹಣೆ ನಡೆಯುತ್ತಿತ್ತು. ಜಿಎಸ್ ಟಿ ಯಿಂದಾಗಿ, ನೋಟ್ ಬಂಧಿಯಿಂದಾಗಿ ಎಲ್ಲ ವರ್ಗದವರು ಕಷ್ಟಪಡುವಂತಾಗಿದೆ. ನಿಮ್ಝ್, ರೇಲ್ವೆ ವಲಯದಂತ ಪ್ರಮುಖ ಯೋಜನೆಗಳು ಜಿಲ್ಲೆಗೆ ಮಂಜೂರಾಗಿದ್ದವು ಆದರೆ ಕೇಂದ್ರ ಸರ್ಕಾರ ಎಲ್ಲ ಯೋಜನೆಗಳನ್ನು ವಾಪಸ್ ಪಡೆದಿದೆ. ಕಾರಣ ಇದು ಖರ್ಗೆ ಅವರ ಜಿಲ್ಲೆಯಾಗಿದೆ ಎಂದು ಕೇಂದ್ರ ಸರ್ಕಾರದ ದ್ವೇಷ ರಾಜಕಾರಣದ ವಿರುದ್ಧ ಹರಿಹಾಯ್ದರು.
ಮಹಾಲಕ್ಷ್ಮಿ ಯೋಜನೆ, ಖಾಲಿ ಹುದ್ದೆಗಳ ಭರ್ತಿ ಮಾಡುತ್ತೇವೆ, ಅಗ್ನಿವೀರ್ ಯೋಜನೆ ರದ್ದು, ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳ ಹೆಚ್ಚಳ, ರೈತರ ಸಾಲ ಮನ್ನಾ ಮಾಡುವ ಉದ್ದೇಶ ಹೊಂದಲಾಗಿದೆ. ರೈತರ ಸಾಲ ಮನ್ನಾಮಾಡಲು ಹಣವಿಲ್ಲ ಎಂದ ಮೋದಿ ಬಂಡವಾಳಶಾಯಿಗಳ 16 ಲಕ್ಷಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.
ಅವರು ಬಹಳ ದೊಡ್ಡ ಭರವಸೆ ನೀಡಿದ್ದರು. ಅವುಗಳಲ್ಲಿ ತೊಗರಿ ಹಬ್ ಮಾಡುವುದು ಕೂಡಾ ಸೇರಿತ್ತು. ಎಂಎಸ್‍ಪಿ ಫಿಕ್ಸ್ ಮಾಡುವುದಾಗಿ ಹೇಳಿದ್ದರು. ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲಿಂಡರ, ಬೇಳೆ, ದಿನಬಳಕೆ ವಸ್ತುಗಳು ಬಂಗಾರ, ಬೆಳ್ಳಿ ಬೆಲೆ ಏರಿವೆ. ಪ್ರತಿಯೊಂದಕ್ಕೂ ಜಿಎಸ್‍ಟಿ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಯಾವುದನ್ನೂ ಮೋದಿ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತರಿಗೆ ಅನುಕೂಲ ಮಾಡಿಕೊಡಲಿದ್ದೇವೆ ಎಂದು ಅವರು ಭರವಸೆ ನೀಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಮುಟ್ಟುತ್ತಿರುವ ಬಗ್ಗೆ ಸಭಿಕರಿಗೆ ಕೇಳಿ ಖಾತ್ರಿ ಪಡೆಸಿಕೊಂಡ ಪ್ರಿಯಾಂಕಾ ಗಾಂಧಿ ಅವರು, ಕಾಂಗ್ರೆಸ್ ಸರ್ಕಾರ ಬಡವರ ಪರವಿರುವ ಪಕ್ಷವಾಗಿದ್ದು, ಬಿಜೆಪಿ ಶ್ರೀಮಂತರ ಪಕ್ಷವಾಗಿದೆ ಎಂದರು.
ಕಾಂಗ್ರೆಸ್ಸೇತರ ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ತಳ್ಳಲಾಗಿದೆ. ಆದರೂ ಕೂಡಾ ಮಾಧ್ಯಮಗಳು ಸುಮ್ಮನಿವೆ. ಕಾರಣ ಬಹುತೇಕ ಮಾಧ್ಯಮಗಳು ಶ್ರೀಮಂತರ ಆಧೀನದಲ್ಲಿವೆ. ತೆಲಂಗಾಣ್ ಮುಖ್ಯಮಂತ್ರಿ ರೇವಂತರೆಡ್ಡಿ ಮನೆಗೆ ದಿಲ್ಲಿ ಪೆÇಲೀಸರು ಬಂದಿರುವ ಬಗ್ಗೆ ಯಾವ ಮಾಧ್ಯಮಗಳು ಪ್ರಶ್ನಿಸುವುದಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.
ಬಿಜೆಪಿಗೆ 400 ಸೀಟು ಈ ಸಲ ಸಿಕ್ಕರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಂವಿಧಾನದಿಂದ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಅವಕಾಶ ಹಾಗೂ ಹಕ್ಕುಸಿಗುತ್ತದೆ. ಆದರೆ ಸಂವಿಧಾನ ಬದಲಾದರೆ ಎಲ್ಲ ಅವಕಾಶಗಳು ಕಳೆದು ಹೋಗಲಿವೆ. ಕೋಲಿ ಸಮಾಜವನ್ನು ಎಸ್‍ಟಿ ಸೇರಿಸಲು ರಾಜ್ಯ ಸರ್ಕಾರ ಕಳಿಸಿದ ಪ್ರಸ್ತಾವನೆಯನ್ನು ಮೋದಿ ಸರ್ಕಾರ ತಿರಸ್ಕಾರ ಮಾಡಿದೆ ಎಂದು ದೂರಿದರು.
ಡಿಆರ್ ಡಿಓ, ಇಸ್ರೋ, ಐಐಟಿ ಸೇರಿದಂತೆ ಪ್ರಮುಖ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ಇಂತಹ ಯಾವುದಾದರೊಂದು ಯೋಜನೆಯನ್ನು ಮೋದಿ ಜಾರಿಗೆ ತಂದಿದ್ದರೆ ಹೇಳಲಿ. ಬಡವರು ಬಡವರಾಗಿ ಉಳಿಯುತ್ತಿದ್ದಾರೆ. ಶ್ರೀಮಂತರು ಶ್ರೀಮಂತರಾಗಿದ್ದಾರೆ. ಇವುಗಳ ಬಗ್ಗೆ ನೀವು ಪ್ರಶ್ನೆ ಮಾಡಿ, ನೀವು ಸುಮ್ಮನಿದ್ದರೆ ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ಮೋದಿ ಮತ ಕೇಳಲು ಬರುತ್ತಾರೆ ಎಂದು ಅವರು ಎಚ್ಚರಿಸಿದರು.
ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಸಂವಿಧಾನ ದುರ್ಬಲಗೊಳಿಸುವ ಮಾತು ನಡೆಯುತ್ತಿದೆ. ವಿಚಾರ ಮಾಡಿ ಮತದಾನ ಮಾಡಿ. ನಿಮಗೆ ಟಿವಿಯಲ್ಲಿ ಏನು ತೋರಿಸಲಾಗುತ್ತಿದೆ ಅದು ಸತ್ಯವಲ್ಲ. ಜನರು ಹೇಗೆ ಕಷ್ಟಪಡುತ್ತಿದ್ದಾರೆ ಎನ್ನುವ ಕುರಿತು ಮೋದಿಗೆ ಗೊತ್ತಿಲ್ಲ. ಈ ಸರ್ಕಾರವನ್ನು ತೊಲಗಿಸಿ ನಿಮಗೆ ಅನುಕೂಲವಾಗುವಂತ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. ಕಳೆದ ಐವತ್ತು ವರ್ಷದಿಂದ ನಿಮ್ಮ ಸೇವೆ ಮಾಡುತ್ತಿರುವ ಖರ್ಗೆ ಅವರಿಗೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.
ಎಲ್ಲರಿಗೂ ನನ್ನ ನಮಸ್ಕಾರ ಎಂದು ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಪ್ರಿಯಾಂಕಾ ಗಾಂಧಿ ಅವರು, ತಾವು ಸಭೆಗೆ ತಡವಾಗಿ ಬಂದಿರುವುದಕ್ಕೆ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕಾಯಿಸಿದ್ದಕ್ಕೆ ಕ್ಷಮೆ ಕೇಳಿದರು. ಇದು ಬಸವಣ್ಣನವರ ಹಾಗೂ ಖಾಜಾಬಂದೇವನಾಜರ ಪ್ರವಿತ್ರ ಭೂಮಿ ಇದ್ದು. ಸತ್ಯ ಹಾಗೂ ಕ್ರಾಂತಿ ಮತ್ತು ಖರ್ಗೆ ಅವರ ಕರ್ಮಭೂಮಿಯಾಗಿದೆ ಎಂದು ಅವರು ಬಣ್ಣಿಸಿದರು.