ರಾಯ್‌ಬರೇಲಿ ಕೈ ಅಭ್ಯರ್ಥಿ ಆಯ್ಕೆ ಕುತೂಹಲ
ಲಖನೌ/ನವದೆಹಲಿ,ಏ.೨೮- ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್‌ಬರೆಲ್ ಅಭ್ಯರ್ಥಿಗಳ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟುಹಾಕಿರುವ ಕಾಂಗ್ರೆಸ್ ಈ ಎರಡೂ ಕ್ಷೇತ್ರಗಳಿಂದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಬೇಕು ಎನ್ನುವ ಕೂಗು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.
ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯ ವಿಚಾರವನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲಿಗೆ ಹಾಕಲಾಗಿದೆ. ಹೀಗಾಗಿ ಈ ಎರಡೂ ಕ್ಷೇತ್ರದಿಂದ ಗಾಂಧಿ ಕುಟುಂಬದ ಸದಸ್ಯರು ಸ್ಪರ್ಧೆ ಮಾಡಲಿದ್ದಾರಾ ಅಥವಾ ಬೇರೆಯವರು ಕಣಕ್ಕಿಳಿಯಲಿದ್ದಾರಾ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.
ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಹೊರತುಪಡಿಸಿ ಕಾಂಗ್ರೆಸ್ ತನ್ನ ಎಲ್ಲಾ ೧೭ ಅಭ್ಯರ್ಥಿಗಳನ್ನು ಘೋಷಿಸಿದೆ.
ಕಾಂಗ್ರೆಸ್ ಚುನಾವಣಾ ಸಮಿತಿ ಉತ್ತರ ಪ್ರದೇಶ ಕ್ಷೇತ್ರಗಳ ಕುರಿತು ನಿನ್ನೆ ಸಂಜೆ ನಡೆದ ಸಭೆಯಲ್ಲಿ ಚರ್ಚಿಸಿತು, ಎಐಸಿಸಿ ರಾಜ್ಯ ಉಸ್ತುವಾರಿ ಅವಿನಾಶ್ ಪಾಂಡೆ ಮತ್ತು ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ ಸೇರಿದಂತೆ ಚುನಾವಣಾ ಸಮಿತಿ ಸದಸ್ಯರು ಭಾಗಿಯಾಗಿದ್ದರು
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ಕೆಸಿ ವೇಣುಗೋಪಾಲ್, ಮಧುಸೂದನ್ ಮಿಸ್ತ್ರಿ, ಸಲ್ಮಾನ್ ಖುರ್ಷಿದ್, ಉತ್ತಮ್ ರೆಡ್ಡಿ ಮತ್ತು ಅಮೀ ಯಾಜ್ಞಿಕ್ ಉಪಸ್ಥಿತರಿದ್ದರು.
ಕೇಂದ್ರ ಚುನಾವಣಾ ಸಮಿತಿ ಪಂಜಾಬ್‌ನ ಐದು ಸ್ಥಾನಗಳ ಬಾಕಿಯಿರುವ ಬಗ್ಗೆ ರಾಜ್ಯ ಅಧ್ಯಕ್ಷ ಅಮರಿಂದರ್ ವಾರಿಂಗ್ ಮತ್ತು ವಿರೋಧ ಪಕ್ಷದ ನಾಯಕ ಪರತಾಪ್ ಬಾಜ್ವಾ ಅವರೊಂದಿಗೆ ಚರ್ಚಿಸಿದೆ.ಮಾರ್ಚ್ ೨೧ ರಂದು ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ರಾಹುಲ್ ಮತ್ತು ಪ್ರಿಯಾಂಕಾಗೆ ಇದೇ ರೀತಿಯ ಮನವಿ ಮಾಡಲಾಗಿದ್ದು, ಈ ಬಗ್ಗೆ ಗಾಂಧಿ ಕುಟುಂಬ ಮತ್ತು ಪಕ್ಷದ ವರಿಷ್ಠರು ಕರೆ ತೆಗೆದುಕೊಳ್ಳುತ್ತಾರೆ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ
ಅಮೇಥಿಗೆ ರಾಹುಲ್ ಭೇಟಿ
ಪಕ್ಷದ ಟಿಕೆಟ್ ಯಾರಿಗೆ ಎನ್ನುವ ಕುತೂಹಲದ ನಡುವೆ ರಾಹುಲ್ ಗಾಂಧಿ ಅವರು ಮೇ ೨ ಅಥವಾ ೩ ರಂದು ಅಮೇಥಿಗೆ ಭೇಟಿ ನೀಡುವ ಸಾಧ್ಯತೆಯಿದೆ, ಅಂದು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವಾಗಿದೆ.
ಅಮೇಥಿ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆಗಳು ತುಂಬಾ ಹೆಚ್ಚಿವೆ ಎಂದು ಉನ್ನತ ಮೂಲಗಳು ಖಚಿತ ಪಡಿಸಿವೆ
೨೦೧೯ ರಲ್ಲಿ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಪಕ್ಷ ಅಮೇಥಿಯಿಂದ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸುತ್ತದೆ ಎಂದು ಹೇಳಲಾಗುತ್ತಿದೆ.