ಗುಡುಗು ಮತ್ತು ಸಿಡಿಲಿನಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಕೆಲವು ಸಲಹೆಗಳು
ಕಲಬುರಗಿ:ಏ.25:ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೆಳಕಂಡಂತೆ ಕೆಲವು ಸಲಹೆ/ಸೂಚನೆಗಳನ್ನು ನೀಡಿದೆ. ಗುಡುಗು-ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಸಾರ್ವಜನಿಕರು ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು-ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮೊಬೈಲ್ ಫೋನ್ ಹಾಗೂ ದೂರವಾಣಿ ಬಳಸುವಂತಿಲ್ಲ: ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೆÇೀನ್ ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿಯನ್ನು ಬಳಸಬಾರದು. ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ. ಬೆಂಕಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿಂದ ದೂರವಿರಬೇಕು. ಮಕ್ಕಳು, ವಯೋವೃದ್ಧರು, ಜಾನುವಾರುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸಬೇಕು.
ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರೆ ಯಾವುದೇ ಅವಶೇಷಗಳನ್ನು ತೆಗೆದುಹಾಕುವುದು. ಸಿಡಿಲು ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು. ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಒಗೆಯಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಮೋಟಾರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನಗಳ ಸಂಚಾರವನ್ನು ಮಾಡಬಾರದು. ಆಟದ ಮೈದಾನ, ಉದ್ಯಾನವನಗಳು, ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಬೇಕು. ದೋಣಿ ವಿಹಾರ ಅಥವಾ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು. ಅರಣ್ಯ ಪ್ರದೇಶದಿಂದ ಗಿಡ ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು ಮಿಂಚಿನ ಒಡೆತದಿಂದಾಗಿ ಕಾಡ್ತಿಚ್ಚು ಸಂಭವಿಸುವ ಸಾಧ್ಯತೆಯಿದೆ.
ಸಿಡಿಲು/ಮಿಂಚು ಬಡಿದಾಗ ಪಾಲಿಸಬೇಕಾದ ಪ್ರಥಮ ಚಿಕಿತ್ಸಾ ವಿಧಾನ ಇಂತಿದೆ. ಸಿಡಿಲು / ಮಿಂಚು ಬಡಿದ ಸಮಯದಲ್ಲಿ ಪ್ರಾಥಮಿಕವಾಗಿ 112 / 108 ಸಹಾಯವಾಣಿಗೆ ಕರೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿಯು ಆಗಮಿಸುವ ಮುನ್ನವೇ ಈ ಕೆಳಕಂಡಂತೆ ನೀಡುವ ಅಗತ್ಯ ಪ್ರಥಮ ಚಿಕಿತ್ಸೆಯಿಂದ ಸಿಡಿಲು / ಮಿಂಚಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವನ್ನು ಉಳಿಸಬಹುದಾಗಿದೆ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ದೇಹದಲ್ಲಿ ಯಾವುದೇ ವಿದ್ಯುತ್ ಕಣಗಳು (electrical charges) ಸಂಚಾರವಾಗುವುದಿಲ್ಲ. ಆದ್ದರಿಂದ, ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ಮುಟ್ಟಿ ಉಪಚರಿಸುವ ವ್ಯಕ್ತಿಗೆ ಯಾವುದೇ ಅಪಾಯವಿರುವುದಿಲ್ಲ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಉಸಿರಾಟ ಹಾಗೂ ಎದೆ ಬಡಿತವನ್ನು ಪರೀಕ್ಷಿಸಬೇಕು. ವ್ಯಕ್ತಿಯ ದವಡೆಗೆ ನೇರವಾಗಿ ಕುತ್ತಿಗೆಯಲ್ಲಿರುವ ರಕ್ತನಾಳವನ್ನು (Carotid Artery) ಪರೀಕ್ಷಿಸುವುದರಿಂದ ಸುಲಭವಾಗಿ ನಾಡಿ ಮಿಡಿತವನ್ನು ತಿಳಿಯಬಹುದು.