ರಾಜ್ಯದಲ್ಲಿ ನಿರೀಕ್ಷೆಯನ್ನೂ ಮೀರಿ ಬಿಜೆಪಿ ಪರವಾದ ವಾತಾವರಣವಿದೆ; ಬಿ.ವೈ ವಿಜಯೇಂದ್ರ
ದಾವಣಗೆರೆ, ಏ.26; ಮತದಾರರ ಮನಸ್ಸು ಗೆಲ್ಲಬೇಕೆಂದು ಕಾಂಗ್ರೆಸ್ಸಿನವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್ಸಿನವರು ಎಷ್ಟೇ ಪ್ರಯತ್ನಪಟ್ಟರೂ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪರ ಮತದಾರರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಪರ ಇರಬೇಕೆಂದು ಮತದಾರರು ಗಟ್ಟಿ ತೀರ್ಮಾನ ಮಾಡಿದ್ದು, ರಾಜ್ಯದಲ್ಲಿ ನಿರೀಕ್ಷೆಯನ್ನೂ ಮೀರಿ ಬಿಜೆಪಿ ಪರವಾದ ವಾತಾವರಣ
ಇದೆ ಎಂದರು.
ರಾಜ್ಯದ 28 ಕ್ಷೇತ್ರದಲ್ಲೂ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ನಮಗಿದೆ. ದಾವಣಗೆರೆ ಕ್ಷೇತ್ರದಲ್ಲಿ ಬೂತ್ ಅಧ್ಯಕ್ಷರ ಸಭೆ, ಹರಿಹರದಲ್ಲಿ ರೋಡ್ ಶೋನಲ್ಲಿ ಭಾಗವಹಿಸುವೆ. ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಹ ಏ.28ಕ್ಕೆ ಇಲ್ಲಿ ಪ್ರಚಾರಕ್ಕೆ ಇಲ್ಲಿಗೆ ಬರಲಿದ್ದಾರೆ. ಇಲ್ಲಿ ಗಾಯತ್ರಿ ಸಿದ್ದೇಶ್ವರ ಭಾರೀ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದು ಅವರು ಹೇಳಿದರು.
ಚುನಾವಣೆ ಘೋಷಣೆಗೆ ಮುನ್ನ ದಾವಣಗೆರೆಯಲ್ಲಿ ತುಂಬಾ ಗೊಂದಲ ಇತ್ತು. ಈಗ ಅದೆಲ್ಲವನ್ನೂ ಮರೆತು, ಒಗ್ಗಟ್ಟಿನಿಂದ ನಮ್ಮೆಲ್ಲಾ ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲೂ ದಿನದಿಂದ ದಿನಕ್ಕೆ ವಾತಾವರಣ ಚನ್ನಾಗಿ ಆಗುತ್ತಿದೆ. ಅಲ್ಲಿನ ಕಾರ್ಯಕರ್ತರೆಲ್ಲರೂ ರಣೋತ್ಸಾಹದಲ್ಲಿದ್ದಾರೆ. ನಾವು ಬಿ.ವೈ.ರಾಘವೇಂದ್ರ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆಂದುಕೊಂಡಿದ್ದೆವು. ಈಗ ಅಲ್ಲಿನ ಕಾರ್ಯಕರ್ತರ ಉತ್ಸಾಹ ನೋಡಿ, ರಾಘವೇಂದ್ರರವರು 4 ಲಕ್ಷ ಮತಗಳ ಅಂತರದ ಜಯ ದಾಖಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಬಿಟ್ಟು ಬೇರೆ ಯಾರೂ ಇಲ್ಲ. ರಾಘವೇಂದ್ರರಿಗೆ ಸರಿಸಾಟಿಯಾಗಿ ಕೂಡ ಯಾರೂ ಅಲ್ಲಿಲ್ಲ. ಚಿಕ್ಕಮಗಳೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಾಮರಾಜ ನಗರ ಸೇರಿದಂತೆ
ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಕನಸು ಕಾಣುತ್ತಿದೆ. ಆದರೆ, ಎಲ್ಲಾ ಕಡೆಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರವಾದ ವಾತಾವರಣ ಇದೆ. ನಾವಂತೂ ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಲಿದ್ದೇವೆ ಎಂದು ವಿಜಯೇಂದ್ರ ಪುನರುಚ್ಛರಿಸಿದರು.