೯೫ ಶತಕೋಟಿ ಡಾಲರ್ ನೆರವಿಗೆ ಸಂಸತ್ ಅನುಮೋದನೆ
ವಾಷಿಂಗ್ಟನ್, ಏ.೨೫-ಉಕ್ರೇನ್, ಇಸ್ರೇಲ್ ಮತ್ತು ತೈವಾನ್‌ಗೆ ೯೫ ಶತಕೋಟಿ ಡಾಲರ್ ಯುದ್ಧನೆರವು ಒದಗಿಸುವ ಮಸೂದೆಗೆ ಅಮೆರಿಕದ ಸಂಸತ್ ೭೯-೧೮ ಮತಗಳಿಂದ ಅನುಮೋದನೆ ನೀಡಿದೆ.
ವಿದೇಶದಲ್ಲಿ ನಡೆಯುವ ಯುದ್ಧಗಳಲ್ಲಿ ಅಮೆರಿಕ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ಹಲವು ತಿಂಗಳಿಂದ ಮುಂದುವರಿದ ಚರ್ಚೆಯ ಬಳಿಕ ಅಂತಿಮವಾಗಿ ಮಸೂದೆಯನ್ನು ಅಂಗೀಕರಿಸಿ ಸಹಿಗಾಗಿ ಅಧ್ಯಕ್ಷ ಜೋ ಬೈಡೆನ್ ಕಚೇರಿಗೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಮಂಗಳವಾರ ಹೌಸ್ ಆಫ್ ರಿಪ್ರೆಸೆಂಟಿಟಿವ್ಸ್ (ಪ್ರತಿನಿಧಿಗಳ ಸಭೆ) ಈ ಮಸೂದೆಯನ್ನು ೭೯- ೧೮ ಮತಗಳಿಂದ ಅಂಗೀಕರಿಸಿದೆ. ಮಸೂದೆಗೆ ಅಧ್ಯಕ್ಷ ಜೋ ಬೈಡೆನ್ ಸಹಿಗಾಗಿ ಶ್ವೇತಭವನಕ್ಕೆ ಕಳುಹಿಸಲಾಗುತ್ತದೆ.
ಮಸೂದೆಗೆ ಶೀಘ್ರ ಸಹಿ ಮಾಡುತ್ತೇನೆ. ಈ ವಾರದಿಂದಲೇ ನಾವು ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ತಲುಪಿಸಲು ಪ್ರಾರಂಭಿಸಬಹುದು ಎಂದು ಬೈಡೆನ್ ಹೇಳಿದ್ದಾರೆ.
ಉಕ್ರೇನ್ ರಷ್ಯಾದಿಂದ ನಿರಂತರ ಬಾಂಬ್ ದಾಳಿಯನ್ನು ಎದುರಿಸುತ್ತಿದೆ. ಇರಾನ್‌ನಿಂದ ಹೆಚ್ಚಿನ ದಾಳಿ ಎದುರಿಸಿರುವ ಇಸ್ರೇಲ್, ಗಾಜಾ, ಸುಡಾನ್ ಮತ್ತು ಹೈಟಿ ಸೇರಿದಂತೆ ಪ್ರಪಂಚಾದ್ಯಂತ ಸಂಘರ್ಷ ಮತ್ತು ನೈಸರ್ಗಿಕ ವಿಕೋಪಗಳಿಂದ ತತ್ತರಿಸಿರುವವರಿಗೆ ಮತ್ತು ಹಿಂದೂ ಮಹಾಸಾಗರ- ಫೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಮತ್ತ ಸ್ಥಿರತೆಯನ್ನು ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.