ಉಗ್ರರಿಗೆ ಮರುಕ ಪಟ್ಟಿದ್ದ ಸೋನಿಯಾ: ನಡ್ಡಾ ಆರೋಪ
ಪಾಟ್ನಾ,ಏ.೨೫- ೨೦೦೮ ರಲ್ಲಿ ನಡೆದ ಬಾಟ್ಲಾ ಹೌಸ್ ಎನ್‌ಕೌಂಟರ್ ನಂತರ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು “ಭಯೋತ್ಪಾದಕರಿಗಾಗಿ ಮರುಕಪಟ್ಟಿದ್ದರು ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭಾರತವನ್ನು “ದುರ್ಬಲಗೊಳಿಸಲು” ಪ್ರಯತ್ನಿಸುವವರಿಗೆ ಯಾವಾಗಲೂ ಬೆಂಬಲವಾಗಿ ನಿಂತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಹಾರದ ಮಧುಬನಿಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದ ಚಿತ್ರಗಳು ಸೋನಿಯಾ ಗಾಂಧಿಯವರ ಕಣ್ಣಲ್ಲಿ ನೀರು ತರಿಸಿತ್ತು ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ೨೦೧೨ ರ ಹೇಳಿಕೆ ಉಲ್ಲೇಖಿಸಿ ಸೋನಿಯಾ ಗಾಂಧಿಗೂ ದೇಶದ್ರೋಹಿಗಳಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
“ಬಾಟ್ಲಾ ಎನ್‌ಕೌಂಟರ್ ಸಮಯದಲ್ಲಿ, ಭಯೋತ್ಪಾದಕರು ಹತ್ಯೆಯಾಗಿದ್ದರು, ಆಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳುತ್ತಿದ್ದರು.ದೇಶದ್ರೋಹಿಗಳೊಂದಿಗೆ ನಿಮಗೂ ಸಂಬಂಧವೇನು, ನಿಮ್ಮ ಸಹಾನುಭೂತಿಯ ಹಿಂದಿನ ಕಾರಣವೇನು, ಅವರಲ್ಲಿ ನಿಮಗೆ ಇಷ್ಟವಾದುದು ಯಾವುದು ಎಂದಿದ್ದಾರೆ.
೨೦೦೮ರ ಸೆಪ್ಟೆಂಬರ್‌ನಲ್ಲಿ ಬಾಟ್ಲಾ ಹೌಸ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ, ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಶರ್ಮಾ ಮತ್ತು ಇಬ್ಬರು ಭಯೋತ್ಪಾದಕರಾದ ಅತೀಫ್ ಮತ್ತು ಸಾಜಿದ್ ಸಾವನ್ನಪ್ಪಿದ್ದರು
ಆಹಂಕಾರದ ಮೈತ್ರಿಕೂಟ
ಇಂಡಿಯಾ ಮೈತ್ರಿಕೂಟ “ಅಹಂಕಾರಿ” ಮನೋಭಾವದಿಂದ ಕೂಡಿದ ಮೈತ್ರಿಕೂಟ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಯಾರೊಂದಿಗೆ ನಿಲ್ಲುತ್ತಾರೆ ಅವರೆಲ್ಲಾ ದೇಶವನ್ನು ದುರ್ಬಲಗೊಳಿಸುವವರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಇದು ದುರಹಂಕಾರಿ ಮೈತ್ರಿಕೂಟ. ಇಂತಹ ಇಂಡಿಯಾ ಮೈತ್ರಿಕೂಟವನ್ನು ನೀವು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.