ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ: ಖರ್ಗೆ ಭಾವುಕ
ಕಲಬುರಗಿ:ಏ.24: ಮತ ಹಾಕೋಕೆ ಬರದೇ ಇದ್ದರು ಕೂಡ ನಾನು ಸತ್ತ ಮೇಲೆ ಮಣ್ಣಿಗೆ ಬರಬೇಕು ನೀವು. ನಾನು ಸತ್ತರೆ ನಮ್ಮ ಕೆಲಸ ನೆನಪು ಮಾಡಿಕೊಂಡು ಮಣ್ಣು ಹಾಕೋಕೆ ಬನ್ನಿ. ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ ಬನ್ನಿ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ. ಆವಾಗ ನೋಡಪ್ಪ ಆತನ ಮಣ್ಣಿಗೆ ಎಷ್ಟು ಜನ ಬಂದ್ರು ಅಂತಾನಾದ್ರು ಹೇಳಬೇಕು ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಭಾವುಕರಾಗಿ ಹೇಳಿದರು.
ಅಫಜಲಪುರ ಪಟ್ಟಣದಲ್ಲಿ ಬುಧವಾರ ಜರುಗಿದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಕಳೆದ ಬಾರಿ ಸೋಲಾಯ್ತು ಆಗಲಿ, ಸೋಲಾದ್ರು ದೊಡ್ಡ ಸ್ಥಾನ ಸಿಕ್ಕಿದೆ. ನಿಮ್ಮ ವೋಟು ನನಗೆ ತಪ್ಪಿದ್ರೆ ನಿಮ್ಮ ಹೃದಯ ಗೆಲ್ಲೋದಕ್ಕೆ ನನಗೆ ಸಾಧ್ಯ ಆಗಲಿಲ್ಲ ಅಂತಾ ತಿಳಿದುಕೊಳ್ಳುತ್ತೇನೆ ಎಂದರು.
ನಾನು ಅಫಜಲಪುರದಿಂದಲೇ ಸೋತಿದ್ದೇನೆ ಎಂದು ಹೇಳಲಾರೆ. ಯಾಕೆಂದರೆ ನನ್ನ ಸೋಲಿಸಲು ಬಿಡೀ ದೇಶವೇ ಒಗ್ಗಟ್ಟಾಗಿತ್ತು. ಶಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸೂಲಿಬೆಲೆ ಎಲ್ಲರೂ ಸೇರಿ ಇಲ್ಲೇ ಕ್ಯಾಂಪ್ ಮಾಡಿ ನನಗೆ ಗುರಿ ಮಾಡಿದ್ದರು. ಆದರೂ, ಕಲಬುರ್ಗಿ ಜನ ನನ್ನ ಕೈಬಿಡಲ್ಲ ಎಂದು ಭಾವಿಸಿದ್ದೆ, ಸೋಲಾಯಿತು. ಈಗಲೂ ಕೂಡಾ ಮೋದಿ ಅಲ್ಲಿ ಇಲ್ಲಿ ಹೇಳಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ಅವರು ಹೇಳಿದರು.
ನಾನು ರಾಜಕೀಯದಿಂದ ಎಂದಿಗೂ ನಿವೃತ್ತರಾಗುವುದಿಲ್ಲ ಎಂದು ಘೋಷಿಸಿದ ಖರ್ಗೆ ಅವರು, ನಾನು ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ. ಆರ್‍ಎಸ್‍ಎಸ್ ಸಿದ್ದಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ. ಕಳೆದ ಸಲದ ಸೋಲಿನ ವಿಚಾರ ಬಿಡಿ. ನಾವು ಮಾಡಿದ ಕೆಲಸಕ್ಕೆ ನೀವು ಆಶೀರ್ವಾದ ಮಾಡಿ ರಾಧಾಕೃಷ್ಣ ಅವರಿಗೆ ಗೆಲ್ಲಿಸಬೇಕು. ನೀವು ಹಾಗೆ ಮಾಡದಿದ್ದರೆ ನಿಮ್ಮ ಹೃದಯದಲ್ಲಿ ನಾನು ಇಲ್ಲ ಎಂದು ತಿಳಿದುಕೊಳ್ಳುತ್ತೇನೆ. ನಾನು ಸತ್ತರೆ ನನ್ನ ಮಣ್ಣಿಗೆ ನೀವು ಬರಬೇಕು. ನನ್ನನ್ನು ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ ಹೂಳಿದರೆ ಮಣ್ಣು ಹಾಕಲು ಬನ್ನಿ. ಇದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ ಎಂದು ಅವರು ಅತ್ಯಂತ ನೋವಿನಿಂದ ತಿಳಿಸಿದರು.
ಕಾಂಗ್ರೆಸ್ಸಿನವರು ದೇಶಕ್ಕಾಗಿ ಪ್ರಾಣ ಸಹ ಕೊಟ್ಟಿದ್ದಾರೆ. ಅವರ ಮನೆಯಲ್ಲಿ ಒಂದು ಇಲಿ ಸಹ ಸತ್ತಿಲ್ಲ. ಕಾಂಗ್ರೆಸ್ ಸಂವಿಧಾನ ಉಳಿಸುವ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಅವರು ಸೋಲೆ ಸೋಲುತ್ತಾರೆ. ವಾರಣಾಸಿಯಲ್ಲಿ ಗೆಲ್ಲುವುದಕ್ಕೆ ದಾರಿ ಮಾಡಿಕೊಂಡಿದ್ದಾರೆ. ಅಬ್ ಕೀ ಬಾರ್ 400 ಪಾರ್ ಅಂತಾರೆ. ಆದರೆ ನಾವು 200 ಸಹ ಪಾರ್ ಮಾಡಲ್ಲ. ಅದನ್ನ ನಾವು ತಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿರುವುದು ನಾಚಿಕೆಗೇಡಿತನದ್ದು. ಎಂತಹ ಪ್ರಧಾನಿ ಅವರು. ಕಾಂಗ್ರೆಸ್ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ ಹೊರತು ಮಾಂಗಲ್ಯ ಸೂತ್ರ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ಮಾಡಿದರು.