ಸ್ವಾತಂತ್ರ್ಯ ಬಳಿಕ ಮೊದಲ ಬಾರಿ ಮತದಾನ
ಬಸ್ತಾರ್,ಏ.೨೦-ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೭೬ ವರ್ಷಗಳು ಕಳೆದಿವೆ, ನಾವು ೧೮ ನೇ ಲೋಕಸಭೆಯ ಚುನಾವಣಾ ಮತದಾನಕ್ಕೆ ಪ್ರವೇಶಿಸಿದ್ದೇವೆ, ಆದರೆ ೨೦೨೪ ರ ಲೋಕಸಭೆ ಚುನಾವಣೆಗೆ ಮೊದಲು ಬಾರಿ ಮತದಾನ ಮಾಡಿದ ದೇಶದ ಒಂದು ಹಳ್ಳಿಯಿದೆ. ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ತಮ್ಮ ಅತಿ ದೊಡ್ಡ ಯಶಸ್ಸನ್ನು ಸಾಧಿಸಿದ ಕೆಲವೇ ದಿನಗಳಲ್ಲಿ, ಭಯೋತ್ಪಾದನೆಯ ಕೇಂದ್ರ ಬಿಂದು ಬಸ್ತಾರ್ ಚಂದಮೇಟ ಗ್ರಾಮವು ಇತಿಹಾಸ ಸೃಷ್ಟಿಸಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಇಲ್ಲಿ ಲೋಕಸಭೆ ಚುನಾವಣೆ ನಡೆದಿದೆ.
ಒಂದು ಕಾಲದಲ್ಲಿ ನಕ್ಸಲೀಯರ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದ್ದ ಈ ಗ್ರಾಮದಲ್ಲಿ ಲೋಕಸಭೆಯ ಮೊದಲ ಹಂತದಲ್ಲಿ ೧೬೨ ಮಹಿಳೆಯರು ಸೇರಿದಂತೆ ೩೨೫ ನೋಂದಾಯಿತ ಮತದಾರರು ಲೋಕಸಭೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ. ಚಂದಮೇಟದಲ್ಲಿ ಭದ್ರತಾ ಸಿಬ್ಬಂದಿ ಕ್ಯಾಂಪ್ ಸ್ಥಾಪಿಸಿರುವುದು ನಿವಾಸಿಗಳಿಗೆ ಅವರ ಸುರಕ್ಷತೆಯ ಭರವಸೆ ನೀಡಿದೆ.ಅವರು ಯಾವುದೇ ಭಯ -ಆತಂಕವಿಲ್ಲದೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ತಮ್ಮ ಮನೆಗಳಿಂದ ಹೊರಬಂದಿದ್ದಾರೆ.
ಈ ಗ್ರಾಮದಲ್ಲಿ ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಚಂಡಮೇಟ ಗ್ರಾಮದ ಜನರ ಜತೆಗೆ ಅಕ್ಕಪಕ್ಕದ ಕೆಲ ಗ್ರಾಮಗಳ ಜನರ ಕೈ ಬೆರಳಿಗೆ ಮೊಟ್ಟಮೊದಲ ಬಾರಿಗೆ ಚುನಾವಣಾ ಮಸಿ ಬಳಿದಿದ್ದಾರೆ. ಇಲ್ಲಿ ಮಧ್ಯಾಹ್ನ ೩ ಗಂಟೆಗೆ ಮತದಾನ ಮುಕ್ತಾಯವಾಯಿತು. ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಮತಗಟ್ಟೆ ಅಧಿಕಾರಿಗಳು ಇವಿಎಂಗಳೊಂದಿಗೆ ಸುರಕ್ಷಿತವಾಗಿ ಬೇಸ್‌ಗೆ ಮರಳುತ್ತಿರುವುದು ಕಂಡುಬಂದಿತು.ಈ ಪ್ರದೇಶದಲ್ಲಿ ಯಾವುದೇ ಅವಘಡಗಳು ಸಂಭವಿಸಿಲ್ಲ.