ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅನನ್ಯಾಗೆ ೩ನೇ ರ್‍ಯಾಂಕ್
ಹೈದರಾಬಾದ್,ಏ.೧೭- ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯನ್ನು ಭೇದಿಸುವುದು ಕಷ್ಟ ಆ ಪರೀಕ್ಷೆ ಕಬ್ಬಿಣದ ಕಡಲೆ ಎಂಬುದು ಹಲವರ ಅಭಿಪ್ರಾಯ. ಆದರೆ ಬುದ್ಧಿವಂತಿಕೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ೨೦೨೩ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಮೂರನೇ ರ್‍ಯಾಂಕ್ ಗಳಿಸಿರುವ ಅನನ್ಯಾ ರೆಡ್ಡಿ, ಒಂದಷ್ಟು ತಂತ್ರಗಾರಿಕೆ ಇದ್ದರೆ ಗೆಲುವು ನಿಶ್ಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಆಡಳಿತವನ್ನು ಜನರಿಗೆ ಹತ್ತಿರ ತರಬೇಕೆಂಬ ಮಹದಾಸೆ ಹೊಂದಿದ್ದೇನೆ. ನಾನು ಜನಕೇಂದ್ರಿತ ರೀತಿಯಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ತೆಲಂಗಾಣದ ಹಿಂದುಳಿದ ಜಿಲ್ಲೆ ಮಹೆಬೂಬ್‌ನಗರದಿಂದ ಬಂದಿರುವ ಅವರು ಸರ್ಕಾರದ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯ ಅನುಭವ ಮತ್ತು ತಯಾರಿಯನ್ನು ಹಂಚಿಕೊಂಡ ತೆಲಂಗಾಣದ ಮಹೆಬೂಬ್‌ನಗರ ಜಿಲ್ಲೆಯ ದಾನೂರ್ ಅನನ್ಯಾ ರೆಡ್ಡಿ, ನಾಗರಿಕ ಸೇವಾ ಪರೀಕ್ಷೆಯನ್ನು ಭೇದಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೌದು, ಇದೊಂದು ಸವಾಲಿನ ಪರೀಕ್ಷೆ. ಆದಾಗ್ಯೂ, ತಯಾರಿಗಾಗಿ ಕೆಲವು ತಂತ್ರಗಳನ್ನು ಅನುಸರಿಸುವುದು ಮುಖ್ಯ ಎಂದಿದ್ದಾರೆ.
ನಾನು ಪರೀಕ್ಷೆಗಾಗಿ ದಿನಕ್ಕೆ ೬-೮ ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಪರೀಕ್ಷೆಯ ದಿನಾಂಕ ಹತ್ತಿರ ಬಂದಾಗ, ನಾನು ಅಧ್ಯಯನದ ಅವಧಿಯನ್ನು ಹೆಚ್ಚಿಸಿದೆ ಮತ್ತು ದಿನಕ್ಕೆ ೧೨ ರಿಂದ ೧೪ ಗಂಟೆಗಳ ಅಭ್ಯಾಸ ಮಾಡುತ್ತಿದ್ದೆ. ದೇಶಕ್ಕೆ ಮೂರನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದಿದ್ದಾರೆ.
ಅಧ್ಯಯನ ಮಾಡುವಾಗ ತಂತ್ರವನ್ನು ಹೊಂದುವುದು ಬಹಳ ಮುಖ್ಯ. ಪಠ್ಯಕ್ರಮವನ್ನು ಭಾಗಗಳಾಗಿ ವಿಂಗಡಿಸಿ ಮತ್ತು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಅಭ್ಯಾಸ ಇರಬೇಕು. ಇದು ಪರೀಕ್ಷೆಯಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಆಕಾಂಕ್ಷಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿಗೆ ಅನುಗುಣವಾಗಿ ತಯಾರಿ ನಡೆಸಬೇಕು ಮತ್ತು ಇತರರನ್ನು ಅನುಸರಿಸಬಾರದು ಎಂದು ಅವರು ಪರೀಕ್ಷಾರ್ಥಿಗಳಿಗೆ ಸಲಹೆ ನೀಡಿದ್ದಾರೆ.