ದುಬೈನಲ್ಲಿ ವರುಣನ ಅಬ್ಬರ, ಜನಜೀವ ಅಸ್ತವ್ಯಸ್ತ
ದುಬೈ,ಏ.೧೭:ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ಶಾಪಿಂಗ್‌ಮಾಲ್‌ಗಳು ನೀರಿನಿಂದ ಜಲಾವೃತವಾಗಿವೆ.
ರಸ್ತೆಗಳಲ್ಲಿ ಮಂಡಿಯುದ್ದ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ವರ್ಷಧಾರೆಯಿಂದಾಗಿ ಯುಎಇಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ದುಬೈ ವಿಮಾನನಿಲ್ದಾಣದಲ್ಲಿ ಕೇವಲ ೧೨ ಗಂಟೆಯಲ್ಲಿ ೧೦೦ ಮಿಮೀ ಮಳೆಯಾಗಿದ್ದು, ಒಟ್ಟಾರೆ ಕಳೆದ ೨೪ ತಾಸುಗಳಲ್ಲಿ ೧೬೦ ಮಿಮೀ ಮಳೆ ಸುರಿದಿದೆ.
ವರುಣನ ಆರ್ಭಟದಿಂದಾಗಿ ದುಬೈ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟದಲ್ಲಿ ಏರುಪೇರಾಗಿದ್ದು, ಶೀಘ್ರದಲ್ಲೇ ವಿಮಾನ ಸೇವೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.
ಬುಧವಾರ ಮಧ್ಯರಾತ್ರಿವರೆಗೂ ಮಳೆ ಬೀಳುವ ನಿರೀಕ್ಷೆ ಇದೆ. ದುಬೈಗೆ ಆಗಮಿಸುವ ವಿಮಾನಗಳನ್ನು ಬೇರೆಡೆಗೆ ತಾತ್ಕಾಲಿಕವಾಗಿ ಮಾರ್ಗವನ್ನು ಬದಲಿಸಲಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬರದಂತೆ ಜನರಿಗೆ ಸರ್ಕಾರ ಸೂಚನೆ ನೀಡಿತ್ತು. ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್ ತರಗತಿ ನಡೆಸುವಂತೆ ಮತ್ತು ಸರ್ಕಾರಿ ನೌಕರರು ಖಾಸಗಿ ಸಂಸ್ಥೆಯ ನೌಕರರು ಮನೆಯಲ್ಲೇ ಕೆಲಸ ಮಾಡುವಂತೆ ಸೂಚನೆ ನೀಡಿತ್ತು.
ದುಬೈ, ಅಬುಧಾಬಿ, ಶಾರ್ಜಾ,ಕತ್ತಾರ್,ಸೌದಿಅರೇಬಿಯಾದಲ್ಲಿ ಮುಂದಿನ ೨೪ ಗಂಟೆಗಳಲ್ಲಿ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.