ಉದ್ಯೋಗಿ ಸಾವು ತೀವ್ರ ಚರ್ಚೆಗೆ ಗ್ರಾಸ
ಪುಣೆ,ಸೆ.೨೧-ಕೆಲಸದ ಹೊರೆಯಿಂದ ಯುವ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವುದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಗೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಕೆಲಸದ ದಿನಗಳು ವಾರದಲ್ಲಿ ಐದು ದಿನಗಳು ಇರಬೇಕು. ಸರ್ಕಾರಿ-ಖಾಸಗಿ ನೌಕರರು ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಮಾಡಬೇಕು. ಎಲ್ಲಾ ಕೆಲಸದ ಸ್ಥಳಗಳಲ್ಲಿ ನಿಗದಿತ ಕ್ಯಾಲೆಂಡರ್ ಇರಬೇಕು,ಮುಂಬರುವ ಸಂಸತ್ ಅಧಿವೇಶನಗಳಲ್ಲಿ ಅದಕ್ಕಾಗಿ ಸಂಸತ್ತಿನಲ್ಲಿ ಕಾನೂನು ತರಲು ಶ್ರಮಿಸುತ್ತೇನೆ , ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶವನ್ನು ಹಾಕಿದ್ದಾರೆ. ಮೇಲಾಗಿ ಇದೇ ವಿಚಾರವಾಗಿ ಅನ್ನಾ ಅವರ ತಂದೆ ಸಿಬಿ ಜೋಸೆಫ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತರೂರ್ ಹೇಳಿದ್ದಾರೆ.
ಮಾನವ ಹಕ್ಕುಗಳನ್ನು ಕಸಿದುಕೊಳ್ಳಬಾರದು. ಈ ಸಂಸ್ಥೆಗಳು ಅಮಾನವೀಯ ಕೃತ್ಯ ಎಸಗಿದರೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನು ತರಬೇಕು ಎಂದು ಅನ್ನಾ ಸೆಬಾಸ್ಟಿಯನ್ ತಂದೆ ಹೇಳಿದ್ದಾರೆ. ಇದೇ ವಿಷಯವನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಶಶಿ ತರೂರ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಅನ್ನಾ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇರಳದ ಅನ್ನಾ ಸೆಬಾಸ್ಟಿಯನ್ ಪೆರೈಲ್ (೨೬) ನಾಲ್ಕು ತಿಂಗಳ ಕಾಲ ಪುಣೆ ಇವೈ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಜುಲೈ ತಿಂಗಳಲ್ಲಿ ನಿಧನರಾದರು. ಆದರೆ ಕೆಲಸದ ಒತ್ತಡದಿಂದ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಾಯಿ ಅನಿತಾ ಇವೈ ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಪತ್ರ ಬರೆದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಚೇರಿಯಲ್ಲಿನ ತೀವ್ರ ಕೆಲಸದ ಒತ್ತಡವೇ ಆಕೆಯ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಇದೀಗ ಕೇಂದ್ರ ಕಾರ್ಮಿಕ ಇಲಾಖೆ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.